ಸಿಮೆಂಟ್ ಲಾರಿ ಡಿಕ್ಕಿ: ಸ್ಥಳದಲ್ಲೇ ಸವಾರ ಸಾವು

ಕಲಬುರಗಿ:ನ.27: ಸಿಮೆಂಟ್ ತುಂಬಿಕೊಂಡು ಹೊರಟಿದ್ದ ಲಾರಿಯೊಂದು ದ್ವಿಚಕ್ರವಾಹನದ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನ ಸವಾರನು ಸ್ಥಳದಲ್ಲಿಯೇ ಮೃತಪಟ್ಟ ಧಾರುಣ ಘಟನೆ ನಗರದ ಶ್ರೀರಾಮ್ ಮಂದಿರದ ಹತ್ತಿರ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಮೃತನಿಗೆ ನಗರದ ಬನಶಂಕರಿ ನಿವಾಸಿ ಹಾಗೂ ಕೂಲಿ ಕಾರ್ಮಿಕ ಶೇಖ್ ರಫಿಕ್ ತಂದೆ ಶೇಖ್ ಅಬ್ದುಲ್ (26) ಎಂದು ಗುರುತಿಸಲಾಗಿದೆ.
ಶೇಖ್ ರಫಿಕ್ ತನ್ನ ಕೆಲಸವನ್ನು ಮುಗಿಸಿಕೊಂಡು ದ್ವಿಚಕ್ರವಾಹನದ ಮೇಲೆ ಹೋಗುವಾಗ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದ ಸಿಮೆಂಟ್ ಲಾರಿ ಡಿಕ್ಕಿಯಿಂದ ಅಪಘಾತ ಸಂಭವಿಸಿದೆ. ದ್ವಿಚಕ್ರವಾಹನವು ಲಾರಿಯ ಚಕ್ರದಡಿ ಸಿಲುಕಿ ಅಪಘಾತ ಸಂಭವಿಸಿದ ತಕ್ಷಣವೇ ಚಾಲಕನು ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಸುದ್ದಿ ತಿಳಿದು ಸಂಚಾರಿ ಪೋಲಿಸ್ ಠಾಣೆಯ ಎಸಿಪಿ ಡಾ. ಸುಧಾ ಆದಿ, ಪಿಐ ಅಮರೇಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದರು. ಈ ಕುರಿತು ಸಂಚಾರಿ ಪೋಲಿಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.