ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಸಚಿವರಿಗೆ ಮನವಿ

ಹುಬ್ಬಳ್ಳಿ,ನ18- ನಗರದ ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠದಿಂದ ಮಹಾದ್ವಾರದವರೆಗಿನ ರಸ್ತೆಯನ್ನು ಸಿಮೆಂಟ್ ರಸ್ತೆ ಮಾಡುವಂತೆ ಆಗ್ರಹಿಸಿ ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠದ ಟ್ರಸ್ಟ್ ಕಮೀಟಿ ಹಾಗೂ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿ ಸೇವಾ ಸಮಿತಿ ಹಳೇ ಹುಬ್ಬಳ್ಳಿ ವತಿಯಿಂದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಲಾಯಿತು.
ಉತ್ತರ ಕರ್ನಾಟಕದಲ್ಲೇ ಶ್ರೀಮಠವು ಜಗತ್ಪ್ರಸಿದ್ಧ ಮಠವಾಗಿದೆ. ಪ್ರತಿವರ್ಷ ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಸಾವಿರಾರು ಭಕ್ತರು ಮಠಕ್ಕೆ ಆಗಮಿಸುತ್ತಾರೆ. ಪ್ರಸಿದ್ದ ಸ್ಥಳವಾಗಿರುವ ಶ್ರೀಮಠಕ್ಕೆ ಸಿಮೆಂಟ್ ರಸ್ತೆ ನಿರ್ಮಿಸಿದರೆ ಪ್ರವಾಸಿಗರಿಗೆ, ಸ್ಥಳಿಯರಿಗೆ ಅನುಕೂಲವಾಗಲಿದೆ. ಅಲ್ಲದೇ ಮಹಾಶಿವರಾತ್ರಿಯ ಸಂದರ್ಭದಲ್ಲಿ ಶ್ರೀಮಠದಿಂದ ಮಹಾದ್ವಾರದವರೆಗೆ ಉಭಯ ಶ್ರೀಗಳವರ ರಥವು ಆಗಮಿಸುವುದರಿಂದ ಈ ಕಾರ್ಯಕ್ರಮವನ್ನು ಕೂಡ ಸುಗಮವಾಗಿ ನಡೆಸಬಹುದಾಗಿದೆ. ಆದ್ದರಿಂದ ಶ್ರೀಮಠದಿಂದ ಮಹಾದ್ವಾರದವರೆಗೂ ಸಿಮೆಂಟ್ ರಸ್ತೆಯನ್ನು ಮಾಡಿಸಿಕೊಡಬೇಕೆಂದು ಸಚಿವರಲ್ಲಿ ಮನವಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿ ಟ್ರಸ್ಟ್ ಕಮೀಟಿ ಅಧ್ಯಕ್ಷರಾದ ಡಿ.ಡಿ. ಮಾಳಗಿ, ಕಾರ್ಯದರ್ಶಿ ಕೋಳಕೂರ, ವ್ಯವಸ್ಥಾಪಕರಾದ ಈರಣಾ ತುಪ್ಪದ, ಶ್ರೀಮಠದ ಎಲ್ಲ ಧರ್ಮದರ್ಶಿಗಳು ಹಾಗೂ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿ ಸೇವಾ ಸಮಿತಿ ಹಳೇ ಹುಬ್ಬಳ್ಳಿ ಭಾಗದ ಭಕ್ತರು, ಭಾರತೀಯ ಜನತಾ ಪಾರ್ಟಿ ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಸತೀಶ ಶೇಜವಾಡಕರ, ಬಿಜೆಪಿ ಹು-ಧಾ ಮಹಾನಗರ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕಾಟಕರ, ಬಿ. ಎಸ್. ಪಾಟೀಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.