ಸಿಮೆಂಟ್ ಕೈಗಾರಿಕೋದ್ಯಮಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಭೆ:ಕೋವಿಡ್ ನಿಯಂತ್ರಣಕ್ಕೆ ಸಿ.ಎಸ್.ಆರ್.ನಡಿ ಅಗತ್ಯ ನೆರವು ನೀಡಲು ಮನವಿ

ಕಲಬುರಗಿ,ಮೇ.29:ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಸಿಮೆಂಟ್ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಿ ಕೋವಿಡ್-19 ಸೋಂಕು ನಿರ್ವಹಣೆಗೆ ಸಾಮಾಜಿಕ ಹೊಣೆಗಾರಿಕೆಯಡಿ ಅಗತ್ಯ ನೆರವು ನೀಡಬೇಕು ಎಂದು ಮನವಿ ಮಾಡಿಕೊಂಡರು.

ಸಚಿವ ಮುರುಗೇಶ ನಿರಾಣಿ ಅವರು ಮಾತನಾಡಿ ಕೋವಿಡ್-19 ಸಾಂಕ್ರಾಮಿಕ ಸೋಂಕು ನಿಯಂತ್ರಣ ಮತ್ತು ನಿರ್ವಹಣೆಗೆ ತುರ್ತಾಗಿ ಆರೋಗ್ಯ ಸೇವೆ ಸುಧಾರಣೆ ಮಾಡಬೇಕಿದೆ. ಆಕ್ಸಿಜನ್ ಜನರೇಷನ್ ಪ್ಲ್ಯಾಟ್ ಸ್ಥಾಪನೆ, ಆಕ್ಸಿಜನ್ ಬೆಡ್ ಹೆಚ್ಚಳ ಸೇರಿದಂತೆ ಆರೋಗ್ಯ ಸಂಸ್ಥೆಗಳಿಗೆ ಸಕಲ ಮೂಲಸೌಕರ್ಯಗಳನ್ನು ಒದಗಿಸಬೇಕಿದೆ. ಆರೋಗ್ಯ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಸ್ಥಳೀಯ ಜನರ ಸಂಕಷ್ಠಕ್ಕೆ ಸ್ಪಂದಿಸಲು ಉದ್ಯಮಿಗಳು ಉದಾರವಾಗಿ ನೆರವು ನೀಡಲು ಮುಂದೆ ಬರಬೇಕು ಎಂದು ಕರೆ ನೀಡಿದರು.

ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಮಾತನಾಡಿ ಜಿಲ್ಲೆಯ ಸಿಮೆಂಟ್ ಕಾರ್ಖಾನೆಗಳೊಂದಿಗೆ ಈಗಾಗಲೆ ಸಭೆ ನಡೆಸಿ ಸಿ.ಎಸ್.ಆರ್. ನಡಿ ಅಗತ್ಯ ನೆರವು ನೀಡಲು ಮನವಿ ಮಾಡಿದ್ದು, ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಕ್ಕಿಲ್ಲ ಎಂದರು.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ ಜಿಲ್ಲೆಯಲ್ಲಿ ಭೂಮಿ ಖರೀದಿಸಿ ಉದ್ಯಮ ಮಾಡುತ್ತಿದ್ದೀರಿ. ಇಲ್ಲಿನ ನೆಲ, ಜಲ, ನೈಸರ್ಗಿಕ ಸಂಪನ್ಮೂಲ ಬಳಸಿಕೊಳ್ಳಲಾಗುತ್ತಿದೆ. ಇಂತಹ ಒಂದು ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಧಾವಿಸಿ ಮಾನವೀಯತೆ ಮೆರೆಯಬೇಕು ಎಂದು ಉದ್ಯಮಿಗಳಲ್ಲಿ ಮನವಿ ಮಾಡಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಮಾತನಾಡಿ ಕಂಪನಿಗಳು ತಮ್ಮ ಸಿ.ಎಸ್.ಆರ್. ನಿಧಿಯಲ್ಲಿ ಕಲಬುರಗಿ ನಗರ ಅಭಿವೃದ್ಧಿಗೂ ಹೆಚ್ಚಿಗೆ ಗಮನಹರಿಸಬೇಕು ಎಂದರು.

ಜಿಲ್ಲೆಯಲ್ಲಿರುವ ಎ.ಸಿ.ಸಿ., ಓರಿಯಂಟ್, ಚೆಟ್ಟಿನಾಡ್, ಅಲ್ಟ್ರಾಟೆಕ್, ರಾಜಶ್ರೀ, ಶ್ರೀ ಸಿಮೆಂಟ್, ಸೌಥ್ ಇಂಡಿಯಾ ಸೇರಿದಂತೆ ಇನ್ನಿತರ ಕಂಪನಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಶಾಸಕರಾದ ಎಂ.ವೈ.ಪಾಟೀಲ, ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ತಿನ ಶಾಸಕರಾದ ಬಿ.ಜಿ.ಪಾಟೀಲ, ಶಶೀಲ ಜಿ. ನಮೋಶಿ, ಸುನೀಲ ವಲ್ಯಾಪುರೆ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕ ರಘೋಜಿ ಮತ್ತಿತರ ಅಧಿಕಾರಿಗಳು ಇದ್ದರು.