ಸಿಮೆಂಟ್ ಕಾರ್ಖಾನೆ ಪ್ರಾರಂಭಿಸಲು ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಸೆ.17: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರ ನೇತೃತ್ವದಲ್ಲಿ  ಸಮೀಪದ ಡಣಾಪುರ ಬಳಿಯ ಬಿಎಂಎಂ ಕಾರ್ಖಾನೆಯವರು ನೂತನ ಬ್ಲಾಸ್ಟ್ ಹಾಗೂ ಸಿಮೆಂಟ್ ಕಾರ್ಖಾನೆ ಪ್ಲಾಂಟ್‌ ಪ್ರಾರಂಭಿಸಲು ಬಿ.ಎಂ.ಎಂ.ನ ಯೋಜನಾ‌ ನಿಯೋಜಿತ ಪ್ರದೇಶದಲ್ಲಿ ಆಯೋಜಿಸಿದ್ದ ಪರಿಸರ ಸಾರ್ವಜನಿಕರ ಆಲಿಕೆ ಸಭೆಯಲ್ಲಿ ನೂರಾರು ಸಾರ್ವಜನಿಕರು ಭಾಗವಹಿಸಿ ಪರ ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸ್ಥಳೀಯವಾಗಿ ಕಚ್ಚಾ ವಸ್ತುಗಳನ್ನು ಬಳಸಿಕೊಳ್ಳುವುದರ ಜೊತೆಗೆ ನಮ್ಮ ಕಾರ್ಖಾನೆಯಲ್ಲಿಯೇ ಬಳಕೆ ಮಾಡಿದ ನೀರನ್ನು ಪುನರ್ಬಳಕೆ ಮಾಡಿಕೊಂಡು ಈ ಭಾಗದಲ್ಲಿ ಸಿಮೆಂಟ್ ಕಾರ್ಖಾನೆ ಪ್ರಾರಂಭಿಸಲಾಗುವುದು. ಇದರಿಂದ ಸ್ಥಳೀಯರಿಗೆ ಉದ್ಯೋಗ ಸೃಷ್ಠಿಯಾಗಿ ನೂರಾರು ಕುಟುಂಬಗಳ ಬದುಕು ಹಸನಾಗುವುದು. ಅಲ್ಲದೇ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 12,100 ಉದ್ಯೋಗಗಳ ಜೊತೆಗೆ 4200 ಖಾಯಂ ಉದ್ಯೋಗಳು  ಸೃಷ್ಠಿಯಾಗುತ್ತವೆ ಎನ್ನುವ ಕಾರ್ಖಾನೆಯವರ ಮಾತಿಗೆ ನೆರೆದಿದ್ದ ನಾಗರಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. 
ನಂತರ ಕಾರ್ಖಾನೆಯವರು ಪರಿಸರ ಸಾರ್ವಜನಿಕರ ಆಲಿಕೆ ಸಭೆಯಲ್ಲಿ ನೆರೆದಿದ್ದ ಜನರಿಂದ ಕಾರ್ಖಾನೆ ಪ್ರಾರಂಭ ಮಾಡುವುದರಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳ ಕುರಿತು ಅಭಿಪ್ರಾಯಗಳನ್ನು ಸಂಗ್ರಹಿಸಿದರು.
 ಆಕ್ರೋಶ:
ನೆರೆದಿದ್ದ ಸ್ಥಳೀಯ ರೈತ ಮುಖಂಡರೊಬ್ಬರು ಸಿಮೆಂಟ್ ಕಾರ್ಖಾನೆ ಪ್ರಾರಂಭಿಸಿದರೆ ಸ್ಥಳೀಯರಿಗೆ ಉದ್ಯೋಗ ಸೃಷ್ಠಿಯಾಗಿ ಬಡತನ ನಿವಾರಣೆಯಾಗುತ್ತದೆ ಎನ್ನುವ ಅಭಿಪ್ರಾಯಕ್ಕೆ ಸಾರ್ವಜನಿಕರಲ್ಲಿ ಭಾರಿ ವಿರೋಧ ವ್ಯಕ್ತವಾಯಿತು. ಅಲ್ಲದೇ  ನೆರೆದಿದ್ದ ಸಾರ್ವಜನಿಕರು ಒಮ್ಮಲೇ ವೇದಿಕೆ ಮುಂಭಾಗಕ್ಕೆ ಜಮಾಯಿಸಿ ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿದ್ದಂತೆ  ಸ್ಥಳೀಯ ಪೊಲೀಸರು ಸಮಯ ಪ್ರಜ್ಞೆಯಿಂದ ಪರಿಸ್ಥಿತಿಯನ್ನು ತಹಬದಿಗೆ ತಂದರು.
ನಂತರ ವಿಜಯನಗರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಮಹೇಶ್ ಬಾಬು ಮಾತನಾಡಿ, ಯಾರೂ ಸಹ ಗೊಂದಲ ಮಾಡಿಕೊಳ್ಳಬೇಡಿ,  ಇಲ್ಲಿ ನೆರೆದ  ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ಇದೆ. ಹಾಗಾಗಿ ಎಲ್ಲರೂ ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ಎಂದರು. ನಂತರ  ವೇದಿಕೆಯಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡಲಾಯಿತು.
 ಅರ್ಜಿಗಳ ಸ್ವೀಕಾರ
ಬಳ್ಳಾರಿಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಡಾ.ದೊಡ್ಡ ಶಣಯ್ಯರಿಗೆ ಮತ್ತು ವಿಜಯನಗರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಮಹೇಶ್ ಬಾಬುರವರಿಗೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು.
 ಪರ & ವಿರೋಧ :
ಸಭೆಯಲ್ಲಿ ಕೆಲವು ಜನ ಸಾರ್ವಜನಿಕರು ಪ್ಲಾಂಟ್ ಪ್ರಾರಂಭವಾಗುವುದರಿಂದ ಸ್ಥಳೀಯವಾಗಿ ನಮ್ಮ ಮಕ್ಕಳ ಜೊತೆಗೆ ನಮಗೂ ಸಹ ಉದ್ಯೋಗ ದೊರೆದಂತಾಗುತ್ತದೆ. ಒಂದು ವೇಳೆ ಪ್ಲಾಂಟ್ ಹಾಕದೇ ಇದ್ದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದ ನಮ್ಮ ಮಕ್ಕಳು ದೂರದ ಊರುಗಳಿಗೆ ಉದ್ಯೋಗಕ್ಕಾಗಿ ತೆರಳಬೇಕಾಗುವುದರಿಂದ ಪ್ಲಾಂಟ್ ಹಾಕಬೇಕು ಎಂದು ತಮ್ಮ ಅಭಿಪ್ರಾಯ ಮಂಡಿಸಿದರು. ಮತ್ತಷ್ಟು ಜನ ಸಾರ್ವಜನಿಕರು ಇಲ್ಲಿ ಸಿಮೆಂಟ್ ಪ್ಲಾಂಟ್ ಆರಂಭಿಸುವುದರಿಂದ ಸ್ಥಳೀಯ ವಾತಾವರಣ ಕಲುಷಿತಗೊಂಡು ಅಸ್ತಮಾ ಹಾಗೂ ಕ್ಯಾನ್ಸರ್‌ನಂತಹ ಭೀಕರ ಕಾಯಿಲೆಗಳಿಗೆ ತುತ್ತಾಗಿ 80 ವರ್ಷ ಬದುಕುವವರು ಕೇವಲ 40-45 ವರ್ಷಕ್ಕೆ  ಸಾಯುವಂತಹ ಪರಿಸ್ಥಿತಿ ಎದುರಾಗುತ್ತದೆ.  ಅಲ್ಲದೇ ಕಾರ್ಖಾನೆಯವರು ಪ್ಲಾಂಟ್ ಹಾಕುವವರೆಗೆ ಮಾತ್ರ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಿ ಉದ್ಯೋಗ ಕೊಡುತ್ತೇವೆ ಎನ್ನುವ ಸುಳ್ಳು ಭರವಸೆ ನೀಡುತ್ತಾರೆ ಎಂದು ವಿರೋಧ ವ್ಯಕ್ತಪಡಿಸಿದರು.
ಸಭೆಯಲ್ಲಿ ಕಾರ್ಖಾನೆಗೆ ಭೂಮಿ ಕಳೆದುಕೊಂಡವರ ರೋಧನೆ:
ಡಣಾಪುರದ ಬಿಎಂಎಂ ಕಾರ್ಖಾನೆ ಪ್ರಾರಂಭಿಸುವಾಗ ಸ್ಥಳೀಯ ರೈತರು ತಮ್ಮ ಭೂಮಿಯನ್ನು ನೀಡಿದ್ದರು. ಆಗ ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ಕೊಡುವ ಭರವಸೆ ನೀಡಿದ್ದರು ಆದರೆ ಇದುವರೆಗೂ ಉದ್ಯೋಗ ನೀಡದೇ ನಮ್ಮನ್ನು ಕೆಲಸಕ್ಕಾಗಿ ಅಲೆದಾಡಿಸುತ್ತಿದ್ದಾರೆ. ಪ್ಲಾಂಟ್ ಆರಂಭವಾಗುವವರೆಗೂ ನಮಗೆ ಹುಸಿ ಭರವಸೆಗಳನ್ನ ನೀಡಿ ಪ್ಲಾಂಟ್ ಆರಂಭವಾದ ನಂತರ ನಮ್ಮನ್ನ ಚಪ್ಪಲಿ ಹರಿಯುವವರೆಗೂ ಕಂಪನಿಗೆ ಓಡಾಡಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಇಲ್ಲಿ ಪ್ಲಾಂಟ್ ಪ್ರಾರಂಭಿಸುವುದು ಬೇಡವೇ ಬೇಡ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಮಹೇಶ್ ಬಾಬು ಬಳ್ಳಾರಿಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಡಾ.ದೊಡ್ಡ ಶಣಯ್ಯ, ಬಿಎಂಎಂ ಕಾರ್ಖಾನೆಯ ಅಧಿಕಾರಿ ವರ್ಗ ಹಾಗೂ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ನೂತನ ಬ್ಲಾಸ್ಟ್ ಹಾಗೂ ಸಿಮೆಂಟ್ ಕಾರ್ಖಾನೆ ಪ್ರಾರಂಭಿಸಲು ಪರಿಸರ ಸಾರ್ವಜನಿಕರ ಆಲಿಕೆ ಸಭೆಯಲ್ಲಿ ಸಾರ್ವಜನಿಕರಿಗೆ ಅಭಿಪ್ರಾಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಒಂದಷ್ಟು ಜನ ನೂತನ ಕಾರ್ಖಾನೆ ಪ್ರಾರಂಭಿಸಲು ಸಮ್ಮತಿ ನೀಡಿದರೆ, ಮತ್ತೊಂದಷ್ಟು ಜನ ಇಲ್ಲಿ ಕಾರ್ಖಾನೆ ಪ್ರಾರಂಭಿಸುವುದು ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವುಗಳ ಜೊತೆಗೆ ಅರ್ಜಿಗಳಲ್ಲೂ ಸಹ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಇವೆಲ್ಲವುಗಳನ್ನೂ ಪರಿಶೀಲಿಸಿ ಮುಂದಿನ ತೀರ್ಮಾನ ತಿಳಿಸಲಾಗುವುದು.
 – ಮಹೇಶ್ ಬಾಬು, ಅಪರ ಜಿಲ್ಲಾಧಿಕಾರಿಗಳು, ವಿಜಯನಗರ.