ಸಿಮೆಂಟ್ ಕಂಪನಿಯ ವಿರುದ್ಧ ಧರಣಿ: ಸ್ಥಳದಲ್ಲಿ ಮೃತಪಟ್ಟ ರೈತ

ಸೇಡಂ,ಮೇ 28: ತಾಲೂಕಿನ ಶ್ರೀಸಿಮೆಂಟ್ ಕಂಪೆನಿಯ ವಿರುದ್ಧ ಕಳೆದ 183 ದಿನಗಳಿಂದ ವಿವಿಧ ಬೇಡಿಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ರೈತ ಓರ್ವ ಅಸ್ವಸ್ಥರಾಗಿ ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಸೇಡಂ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ನಿವಾಸಿ ದೇವಿಂದ್ರಪ್ಪ ಮಲ್ಲಣ್ಣ ಜೊಗೆರ (50) ಮೃತಪಟ್ಟ ಹೋರಾಟ ನಿರತ ರೈತ ಎಂದು ತಿಳಿದುಬಂದಿದೆ. ದೇವಿಂದ್ರಪ್ಪ ಶ್ರೀಸಿಮೆಂಟ್ ಕಂಪನಿಗೆ ತನ್ನ 2 ಎಕರೆ 20 ಗುಂಟೆ ಜಮೀನು ನೀಡಿದ್ದು, ಉದ್ಯೋಗ ಇಲ್ಲದೇ ಕೂಲಿ ಮಾಡಿಕೊಂಡಿದ್ದರು.
ಕಂಪನಿಯ ಜಾಬ್ ಕಾರ್ಡ್ ಕೊಟ್ಟು ಮಗನಿಗೆ ಉದ್ಯೋಗ ಕೊಡದೇ ಕಂಪನಿ ಮೋಸ ಮಾಡಿದೆ ಎಂದು ಆರೋಪಗಳು ಕೇಳಿಬಂದಿದೆ. ಮೃತ ವ್ಯಕ್ತಿ ಪತ್ನಿ ಶಾಂತಮ್ಮ, ಮಗಳು ನಾಗಮ್ಮ, ಮಗನಾದ ಮಲ್ಲಪ್ಪ ಹಾಗೂ ಸಲಭಾಗಪ್ಪ ಎಂಬ ಮೂವರು ಮಕ್ಕಳು ಇದ್ದಾರೆ.
ಸೇಡಂ ತಾಲೂಕಿನ ಕೋಡ್ಲಾ ಬೆನಕನಹಳ್ಳಿ ಶ್ರೀಸಿಮೆಂಟ್ ಕಂಪೆನಿ ಎದುರು 2022 ಡಿಸೆಂಬರ್ 1 ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ 183 ನೆ ದಿನಕ್ಕೆ ಕಾಲಿಟ್ಟಿದ್ದು, ಕಂಪೆನಿ ವಿಷಕಾರಿ ಗಾಳಿ ವಾಸನೆ ದಿಂದ ಧರಣಿಯಲ್ಲಿ ಕುಳಿತು ಭೂಮಿ ಕಳೆದುಕೊಂಡ ರೈತ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ಕಂಪನಿಯ ನಿರ್ಲಕ್ಷ್ಯ ಮತ್ತು ಮೋಸದ ಆಟಕ್ಕೆ ರೈತ ಓರ್ವ ಬಲಿಯಾಗಿದ್ದು, ಸಾವಿಗೆ ಶ್ರೀಸಿಮೆಂಟ್ ಕಂಪನಿ ನೇರ ಹೊಣೆ ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆರೋಪಿಸಿ,ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಶ್ರೀಸಿಮೆಂಟ್ ಕಂಪನಿಯ ವಿರುದ್ಧ ರೈತರು ಸೇರಿದಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮೃತ ಕುಟುಂಬಸ್ಥತರ ಆಕ್ರಂದನ ಮುಗಿಲು ಮುಟ್ಟಿದೆ.