ಸಿಬ್ಬಂದಿಗೆ ವೇತನ ನೀಡದಿರುವುದಕ್ಕೆ ಪ್ರತಿಭಟನೆ

ಮೈಸೂರು:ಜ:04: ಕರ್ನಾಟಕ ರಾಜ್ಯ ಗಂಗೂಬಾಯಿ ಹಾನ್ ಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು, ತಾತ್ಕಾಲಿಕ ಬೋಧಕೇತರ ಹಾಗೂ ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡದಿರುವುದನ್ನು ವಿರೋಧಿಸಿ ಸಿಬ್ಬಂದಿಗಳು ವಿವಿ ಆವರಣದೊಳಗೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕಳೆದ ಮೂರು ತಿಂಗಳಿನಿಂದ ನಮಗೆ ವೇತನ ದೊರಕದಿರುವುದು ನಮ್ಮ ಬದುಕನ್ನು ದುಸ್ತರವಾಗಿಸಿದೆಯಲ್ಲದೆ ಬದುಕು ನಡೆಸುವುದೇ ಕಷ್ಟವಾಗಿ ಪರಿಣಮಿಸಿದೆ. ವಿಶ್ವವಿದ್ಯಾಲಯದ ವತಿಯಿಂದ ಹಲವಾರು ಬಾರಿ ಸಂಬಂಧಿಸಿದವರನ್ನು ಭೇಟಿ ಮಾಡಲಾಗಿದೆ. ವಿಶ್ವವಿದ್ಯಾಲಯದಲ್ಲಿ ಯಾವುದೇ ಆಂತರಿಕ ಸಂಪನ್ಮೂಲ ಇಲ್ಲದೆ ಇರುವುದರಿಂದ ಪ್ರತ್ಯೇಕ ಲೆಕ್ಕ ಶೀರ್ಷಿಕೆಯಡಿ ಅನುದಾನ ಬಿಡುಗಡೆ ಮಾಡಲು ಪತ್ರವ್ಯವಹಾರ ಮಾಡಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಶಾಂತಿಯುತವಾಗಿ ಕೈಗೆ ಕಪ್ಪುಪಟ್ಟಿ ಧರಿಸಿ ಕಛೇರಿ ಕಾರ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ಸಾಂಕೇತಿಕವಾಗಿ ಶಾಂತಿಯುವ ಪ್ರತಿಭಟನೆ ನಡೆಸಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಶಿವಕುಮಾರ ಎಂ, ಮಧುಸ್ವಾಮಿ, ಮಂಜುಳಾ ಬಿ, ಪ್ರಸಾದ್ ಎನ್ ತಳವಾರ್, ನಟರಾಜು ಹೆಚ್.ಎಂ, ಸಂತೋಷ್ ಕುಮಾರ್ ,ವೆಂಕಟೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.