ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ನಿಧನ

ನವದೆಹಲಿ, ಏ.೧೬- ಸಿಬಿಐನ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ(೬೮) ಅವರು ಇಂದು ಮುಂಜಾನೆ ನವದೆಹಲಿಯಲ್ಲಿ ವಿಧಿವಶರಾಗಿದ್ದಾರೆ.

ಕೋವಿಡ್-೧೯ ಸಂಬಂಧಿಸಿದ ಕಾರಣಗಳಿಂದಾಗಿ ಸಾವು ಸಂಭವಿಸಿರಬಹುದೆಂದು ವರದಿಯಾಗಿದೆ. ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಗುರುವಾರ ರಾತ್ರಿ ದೃಢಪಟ್ಟಿತ್ತು.ಶುಕ್ರವಾರ ಬೆಳಿಗ್ಗೆ ೪:೩೦ಕ್ಕೆ ಸಿನ್ಹಾ ನಿಧನರಾದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

೧೯೭೪ನೇ ಬ್ಯಾಚ್ ಬಿಹಾರ ಕೇಡರ್‌ನ ಐಪಿಎಸ್ ಅಧಿಕಾರಿ (ನಿವೃತ್ತ) ಸಿನ್ಹಾ ಹಲವು ಪ್ರಮುಖ ಸ್ಥಾನಗಳ ಜವಾಬ್ದಾರಿ ನಿರ್ವಹಿಸಿದ್ದಾರೆ. ಭಾರತ-ಟಿಬೆಟ್ ಗಡಿ ಭದ್ರತಾ ಪಡೆಯ ಮಹಾನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.

೨೦೧೨ರಲ್ಲಿ ಸಿಬಿಐ ನಿರ್ದೇಶಕರಾಗಿ ನೇಮಕವಾಗುವುದಕ್ಕೂ ಮುನ್ನ ರೈಲ್ವೆ ರಕ್ಷಣಾ ಪಡೆಯ (ಆರ್‌ಪಿಎಫ್) ಮುಖ್ಯಸ್ಥರಾಗಿ, ಸಿಬಿಐನ ಪಾಟ್ನಾ ಮತ್ತು ದೆಹಲಿಯಲ್ಲಿ ಹಲವು ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದರು.