
ಬೆಂಗಳೂರು,ಮೇ.14-ಮುಂದಿನ. ಎರಡು ವರ್ಷಗಳ ಅವಧಿಗೆ ಕೇಂದ್ರೀಯ ತನಿಖಾ ದಳದ (ಸಿಬಿಐ) ನೂತನ ನಿರ್ದೇಶಕರಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಪ್ರವೀಣ್ ಸೂದ್ ಅವರನ್ನು ನೇಮಕ ಮಾಡಲಾಗಿದೆ.
ಪ್ರವೀಣ್ ಸೂದ್ ಅವರನ್ನು ಸಿಬಿಐ) ನೂತನ ನಿರ್ದೇಶಕರಾಗಿ ನೇಮಕ ಮಾಡಿರುವ ಆದೇಶವನ್ನು ಕೇಂದ್ರದ ಸಿಬ್ಬಂದಿ, ಪಿಂಚಣಿ ಮತ್ತು ಸಾರ್ವಜನಿಕ ಅಹವಾಲು ಸಚಿವಾಲಯವು ಹೊರಡಿಸಿದೆ.
ಪ್ರಧಾನ ಮಂತ್ರಿ ನೇತೃತ್ವದ ಕೇಂದ್ರದ ವಿಶೇಷ ಸಮಿತಿಯು ಈ ಹುದ್ದೆಗೆ ಮೂವರು ಅರ್ಹ ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿ ಸಚಿವ ಸಂಪುಟಕ್ಕೆ ಶಿಫಾರಸು ಮಾಡಿತ್ತು.
ಕರ್ನಾಟಕದ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಪ್ರವೀಣ್ ಸೂದ್, ಮಧ್ಯಪ್ರದೇಶದ ಡಿಜಿ-ಐಜಿಪಿ ಸುಧೀರ್‌ಕುಮಾರ್ ಸಕ್ಸೆನಾ ಹಾಗೂ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಡಿ.ಜಿ ತಾಜ್ ಹಸನ್ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು.
ಇದೀಗ, ಪ್ರವೀಣ್ ಸೂದ್ ಅವರನ್ನು ಸಿಬಿಐನ ನೂತನ ನಿರ್ದೆಶಕರಾಗಿ ನೇಮಕ ಮಾಡಿ, ಆದೇಶ ಹೊರಡಿಸಲಾಗಿದೆ.
ಸೇವಾ ಹಿರಿತನ, ಸಮಗ್ರತೆ ಮತ್ತು ಭ್ರಷ್ಟಾಚಾರ ಪ್ರಕರಣಗಳ ತನಿಖೆಯ ಅನುಭವದ ಆಧಾರದ ಮೇಲೆ ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಗೃಹ ಖಾತೆಯು ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ನೀಡುತ್ತದೆ. ಈ ಪಟ್ಟಿಯನ್ನು ಆಯ್ಕೆ ಸಮಿತಿಗೆ ಕಳುಹಿಸಲಾಗುತ್ತದೆ.
ಪ್ರವೀಣ ಸೂದ್ ಅವರು ಕರ್ನಾಟಕ ಕೇಡರ್‌ನ 1986-ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು,ಮೂರು ವರ್ಷಗಳ ಹಿಂದೆ ರಾಜ್ಯದ ಡಿಜಿಪಿಯಾಗಿ ನೇಮಕಗೊಂಡರು.
ಅವರು ಹಿಮಾಚಲ ಪ್ರದೇಶದ ಮತ್ತು ಐಐಟಿ-ದೆಹಲಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ರಾಜ್ಯ ಕೇಡರ್ ಐಪಿಎಸ್ ಅಧಿಕಾರಿಯಾದರು.
ನಗರದಲ್ಲಿ ಡಿಸಿಪಿ, ಹೆಚ್ಚುವರಿ ಪೊಲೀಸ್ ಆಯುಕ್ತ(ಸಂಚಾರ)ಮೈಸೂರು,ಬೆಂಗಳೂರು ಪೊಲೀಸ್ ಆಯುಕ್ತರಾಗಿ ಸಿಐಡಿ ಡಿಜಿಪಿಯಾಗಿ ಸುಮಾರು 38 ವರ್ಷ ಗಳ ಸುಧೀರ್ಘ ಕಾಲ ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ.