ಸಿಬಿಐ ನಿರ್ದೇಶಕರ ಹುದ್ದೆಯ ರೇಸ್‌ನಲ್ಲಿ ಪ್ರವೀಣ್ ಸೂದ್

ಬೆಂಗಳೂರು,ಮೇ.೧೪-ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿ-ಐಜಿಪಿ) ಪ್ರವೀಣ್ ಸೂದ್ ಸೇರಿ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳು ಕೇಂದ್ರೀಯ ತನಿಖಾ ದಳ(ಸಿಬಿಐ) ನಿರ್ದೇಶಕರ ಹುದ್ದೆಯ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಹಾಲಿ ಸಿಬಿಐ ನಿರ್ದೇಶಕರ ಅಧಿಕಾರ ಅವಧಿಯು ಇದೇ ಮೇ.೨೫ ಕ್ಕೆ ಮುಕ್ತಾಯವಾಗುವ ಹಿನ್ನಲೆಯಲ್ಲಿ ನೂತನ ನಿರ್ದೇಶಕರ ಹುದ್ದೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರ ಹೆಸರು ಮುಂಚೂಣಿಯಲ್ಲಿದೆ.
ಸಿಬಿಐ ನಿರ್ದೇಶಕರ ಹುದ್ದೆಗೆ ಕರ್ನಾಟಕ ದೆಹಲಿ ಸೇರಿದಂತೆ ಮೂರು ರಾಜ್ಯಗಳ ಮೂವರು ಐಪಿಎಸ್ ಅಧಿಕಾರಿಗಳ ಹೆಸರು ಪ್ರಸ್ತಾಪವಾಗಿದ್ದು ಈ ಪಟ್ಟಿಯಲ್ಲಿ ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಅವರ ಹೆಸರು ಕೂಡ ಇದೆ.ಸಿಬಿಐ ನಿರ್ದೇಶಕರ ಹುದ್ದೆಗೆ ನೇಮಕ ಪ್ರಕ್ರಿಯೆ ಬಹಳ ಉನ್ನತ ಮಟ್ಟದಲ್ಲಿ ನಡೆಯಲಿದ್ದು ಕುತೂಹಲ ಕೆರಳಿಸಿದೆ.ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷ ನಾಯಕ ಅಧಿರ ರಂಜನ್ ಚೌಧರಿ ಅವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚಿಸಿ, ತೀರ್ಮಾನಿಸಲಾಗುತ್ತಿದೆ.
ಸೇವಾ ಹಿರಿತನ, ಸಮಗ್ರತೆ ಮತ್ತು ಭ್ರಷ್ಟಾಚಾರ ಪ್ರಕರಣಗಳ ತನಿಖೆಯ ಅನುಭವದ ಆಧಾರದ ಮೇಲೆ ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಗೃಹ ಖಾತೆಯು ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ನೀಡುತ್ತದೆ. ಈ ಪಟ್ಟಿಯನ್ನು ಆಯ್ಕೆ ಸಮಿತಿಗೆ ಕಳುಹಿಸಲಾಗುತ್ತದೆ.
ಪ್ರವೀಣ ಸೂದ್ ಅವರು ಕರ್ನಾಟಕ ಕೇಡರ್‌ನ ೧೯೮೬-ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು,ಮೂರು ವರ್ಷಗಳ ಹಿಂದೆ ರಾಜ್ಯದ ಡಿಜಿಪಿಯಾಗಿ ನೇಮಕಗೊಂಡಿದ್ದರು.ಅವರು ಹಿಮಾಚಲ ಪ್ರದೇಶದ ಮತ್ತು ಐಐಟಿ-ದೆಹಲಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ರಾಜ್ಯ ಕೇಡರ್ ಐಪಿಎಸ್ ಅಧಿಕಾರಿಯಾದರು.ನಗರದಲ್ಲಿ ಡಿಸಿಪಿ, ಹೆಚ್ಚುವರಿ ಪೊಲೀಸ್ ಆಯುಕ್ತ(ಸಂಚಾರ) ಮೈಸೂರು,ಬೆಂಗಳೂರು ಪೊಲೀಸ್ ಆಯುಕ್ತರಾಗಿ ಸಿಐಡಿ ಡಿಜಿಪಿಯಾಗಿ ಸುಮಾರು ೩೮ ವರ್ಷ ಗಳ ಸುಧೀರ್ಘ ಕಾಲ ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ.