ಸಿಬಿಐ ತನಿಖೆ ಅಗತ್ಯವಿಲ್ಲ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಮೇ೧೦:ಸಂಸದ ಪ್ರಜ್ವಲ್‌ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಮ್ಮ ಪೊಲೀಸರ ಮೇಲೆ ನಮಗೆ ನಂಬಿಕೆ, ವಿಶ್ವಾಸವಿದೆ. ಅವರು ಕಾನೂನು ಪ್ರಕಾರ ತನಿಖೆ ನಡೆಸಿ ಸತ್ಯವನ್ನು ಬಯಲಿಗೆಳೆಯಲು ಸಮರ್ಥರಿದ್ದಾರೆ ಎಂದರು.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರುಗಳು ಪ್ರಜ್ವಲ್‌ರೇವಣ್ಣ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ರಾಜ್ಯಪಾಲರಿಗೆ ಮಾಡಿರುವ ಮನವಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಬಿಐ ತನಿಖೆ ಅಗತ್ಯವಿಲ್ಲ. ನಮ್ಮ ಪೊಲೀಸರೇ ತನಿಖೆ ಮಾಡುತ್ತಾರೆ. ನಮ್ಮ ಪೊಲೀಸರ ಬಗ್ಗೆ ನಂಬಿಕೆ, ವಿಶ್ವಾಸ ಇದೆ ಎಂದರು.ಬಸವಜಯಂತಿ ದಿನವಾದ ಇಂದು ಮೈಸೂರಿನಲ್ಲಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಿದ್ದೇವೆ. ತನಿಖೆಯಲ್ಲಿ ಯಾರೂ ಮಧ್ಯ ಪ್ರವೇಶ ಮಾಡುವುದಿಲ್ಲ. ನಮ್ಮ ಪೊಲೀಸರು ಸರಿಯಾದ ರೀತಿಯಲ್ಲೇ ತನಿಖೆ ನಡೆಸಿ ಸತ್ಯ ಬಯಲಿಗೆಳೆಯುತ್ತಾರೆ. ನಾನು ಯಾವೊತ್ತು ಎಂದೂ ಪೊಲೀಸರಿಗೆ ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡಿ ಎಂದು ಹೇಳಿಲ್ಲ. ನಮ್ಮ ಪೊಲೀಸರ ಮೇಲೆ ನಂಬಿಕೆ ಇಡಬೇಕು ಎಲ್ಲ ಅಪರಾದ ಪ್ರಕರಣಗ ಳ ತನಿಖೆಯನ್ನು ಮಾಡುವುದೇ ನಮ್ಮ ಪೊಲೀಸರಲ್ಲವೇ ಎಂದು ಪ್ರಶ್ನಿಸಿದರು.ಈ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದ್ದಾಗಿದೆ ಎಂದು ಬಿಜೆಪಿ–ಜೆಡಿಎಸ್ ನಾಯಕರುಗಳು ಹೇಳುತ್ತಿರುವುದು ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಲಿ ಎಂಬ ಉದ್ದೇಶದಿಂದ ಅಷ್ಟೆ ಎಂದು ಹೇಳುವ ಮೂಲಕ ಸಿಬಿಐ ತನಿಖೆ ಬೇಡಿಕೆಯನ್ನು ಮುಖ್ಯಮಂತ್ರಿಗಳು ತಳ್ಳಿ ಹಾಕಿದರು.
ಈ ಪ್ರಕರಣದಲ್ಲಿ ನಾನಾಗಲಿ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆಗಲಿ ಯಾರೂ ಭಾಗಿಯಾಗಿಲ್ಲ. ನಮಗೆ ಎಸ್‌ಐಟಿ ಮೇಲೆ ವಿಶ್ವಾಸವಿದೆ. ತನಿಖೆಯಿಂದ ಸತ್ಯಾಸತ್ಯತೆ ಹೊರಬರುವ ನಂಬಿಕೆಯೂ ಇದೆ ಎಂದರು.ಈ ಹಿಂದೆ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಯಾವುದೇ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟಿದ್ದರಾ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಹಿಂದೆ ಬಿಜೆಪಿಯವರೇ ಸಿಬಿಐನ್ನು ಕರೆಪ್ಷನ್ ಬ್ಯೂರೋ ಇನ್ವೆಸ್ಟಿಗೇಷನ್ ಎಂದು ಕರೆದಿದ್ದರು, ಮಾಜಿ ಪ್ರಧಾನಿ ದೇವೇಗೌಡರು ಸಿಬಿಐ ಚೋರ್ ಬಚಾವೋ ಸಂಸ್ಥೆ ಎಂದು ಜರಿದಿದ್ದರು. ಈಗ ಸಿಬಿಐ ಮೇಲೆ ವಿಶ್ವಾಸ ಬಂತಾ ಎಂದು ವ್ಯಂಗ್ಯವಾಡಿದರು.
ರೇವಣ್ಣ ಪ್ರಕರಣ ರಾಜಕೀಯ ಹಸ್ತಕ್ಷೇಪವಿಲ್ಲ
ಮಾಜಿ ಸಚಿವ ರೇವಣ್ಣ ಅವರ ಬಂಧನಲ್ಲಿ ರಾಜಕೀಯವಿದೆ ಎಂಬ ಆರೋಪಗಳನ್ನು ನಿರಾಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರೇವಣ್ಣ ಬಂಧನದಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ ಎಂದರು.ಮಾಜಿ ಸಚಿವ ರೇವಣ್ಣ ಅವರ ವಿರುದ್ಧ ಸುಖಾಸುಮ್ಮನೆ ಪ್ರಕರಣ ದಾಖಲಿಸಲಾಗಿದೆ ಎಂಬ ಹೇಳಿಕೆಗೆ ಕಿಡಿಕಾರಿದ ಅವರು, ರೇವಣ್ಣ ಅವರ ಮೇಲಿನ ಆರೋಪದಲ್ಲಿ ಹುರುಳೇ ಇಲ್ಲದಿದ್ದರೆ ಅವರು ನಿರೀಕ್ಷಣಾ ಜಾಮೀನು ಕೋರಿದ್ಯಾಕೆ. ನ್ಯಾಯಾಲಯ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿಲ್ಲವೇ ಎಂದು ಪ್ರಶ್ನಿಸಿದರು.
ಈ ಹಿಂದೆ ನಾವು ಅಧಿಕಾರದಲ್ಲಿದ್ದಾಗ ಐಎಎಸ್ ಅಧಿಕಾರಿ ಡಿ.ಕೆ ರವಿ, ಲಾಟರಿ ಪ್ರಕರಣ, ಕೆ.ಜೆ.ಜಾರ್ಜ್, ಪರೇಶ್‌ಮೇಸ್ತಾ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದೇವೆ. ಒಂದರಲ್ಲಾದರೂ ಶಿಕ್ಷೆಯಾಯಿತೇ ಹಾಗೆಂದ ಮಾತ್ರಕ್ಕೆ ನನಗೆ ಸಿಬಿಐ ಮೇಲೆ ನಂಬಿಕೆ ಇಲ್ಲ ಎಂದರ್ಥವಲ್ಲ, ನಮ್ಮ ಪೊಲೀಸರೇ ತನಿಖೆ ಮಾಡಲು ಸಮರ್ಥರಿದ್ದಾರೆ ಎಂದರು.
ಅಭಿನಂದನೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊರರ್ಜಿದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಪ್ರಥಮ ರ್‍ಯಾಂಕ್ಪ ಡೆದಿರುವುದಕ್ಕೆ ಅಭಿನಂದನೆ ಹೇಳಿದ ಮುಖ್ಯಮಂತ್ರಿಗಳು ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪನೆಯ ಉದ್ದೇಶವೇ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಕೂಡ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದಾಗಿದೆ. ಹಿಂದೆ ನಾನು ೧೯೯೪ರಲ್ಲಿ ಹಣಕಾಸು ಸಚಿವನಾಗಿದ್ದಾಗ ದಲಿತ ಸಂಘರ್ಷ ಸಮಿತಿಯವರು ಹೆಂಡದಂಗಡಿ, ಸಾರಾಯಿ ಅಂಗಡಿ ಬೇಡ, ವಸತಿ ಶಾಲೆ ಬೇಕು ಎಂಬ ಘೋಷಣೆಯೊಂದಿಗೆ ಹೋರಾಟ ನಡೆಸಿದ್ದರು. ಅವರೊಂದಿಗೆ ನಿಕಟ ಸಂಪರ್ಕ ನನಗಿದ್ದ ಕಾರಣ ನಾನೂ ಕೂಡ ಗ್ರಾಮೀಣ ಪ್ರದೇಶದಿಂದ ಬಂದವನಾಗಿದ್ದರಿಂದ ಹಳ್ಳಿ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ವಸತಿ ಶಾಲೆ ಆರಂಭಿಸಿದ್ದೆವು ಅದರಂತೆ ಇಂದು ಹೋಬಳಿಗೆ ಒಂದರಂತೆ ೮೦೦ಕ್ಕೂ ಹೆಚ್ಚು ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪಿಸಲಾಗಿದೆ ಎಂದರು.ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬಸವ ಜಯಂತಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಬಸವಣ್ಣನವರ ಮೂರ್ತಿಗೆ ಹಾರ ಹಾಕಿ ಅವರನ್ನು ಸ್ಮರಿಸುತ್ತಾ ಅವರ ವಿಚಾರಧಾರೆಗಳ ದಾರಿಯಲ್ಲಿ ನಡೆಯುವ ಸಂಕಲ್ಪ ತಮ್ಮದಾಗಿದೆ ಎಂದರು.