ಜೈನಮುನಿಗಳಿಗೆ ರಕ್ಷಣೆ:ಪರಂ ಭರವಸೆ

(ಸಂಜೆವಾಣಿ ವಾರ್ತೆ)
ಹುಬ್ಬಳ್ಳಿ, ಜು ೧೦: ಚಿಕ್ಕೋಡಿಯಲ್ಲಿ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳನ್ನು ಬಂಧನ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
ಇಲ್ಲಿನ ಸಮೀಪದ ವರೂರಿನ ನವಗ್ರಹ ಕ್ಷೇತ್ರಕ್ಕೆ ಭೇಟಿ ನೀಡಿ ಜೈನ ಮುನಿಗಳಿಗೆ ರಕ್ಷಣೆ ನೀಡುವ ಭರವಸೆ ನೀಡಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವರೂರಿನ ನವಗ್ರಹ ಕ್ಷೇತ್ರದ ಗುಣಧರನಂದಿ ಮಹಾರಾಜರು ಜೈನಮುನಿಗಳ ಹತ್ಯೆ ಖಂಡಿಸಿ ಉಪವಾಸ ನಡೆಸುತ್ತಿದ್ದರು. ಈ ವಿಷಯ ಗಮನಕ್ಕೆ ಬಂದ ಮೇಲೆ ನಾನು ಸ್ವಾಮೀಜಿ ಜೊತೆ ಮಾತನಾಡಿ ವಿನಂತಿ ಮಾಡಿಕೊಂಡಿದ್ದೇನೆ. ಗೃಹ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಸರ್ಕಾರ ಜೈನ ಸಮುದಾಯದ ಜೊತೆ ಇರೋ ಭರವಸೆ ನೀಡಿದ್ದೇನೆ. ಸ್ವಾಮೀಜಿಗಳು ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಿದ್ದಾರೆ. ನಾನು ಅವರಿಗೆ ಆಭಾರಿ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಕರೆ ಮಾಡಿ ವಿಚಾರಿಸಿದ್ದಾರೆ. ಸ್ವಾಮೀಜಿ ನಾಲ್ಕು ಬೇಡಿಕೆ ಇಟ್ಟಿದ್ದಾರೆ. ಜೈನ ಸ್ವಾಮೀಜಿಗಳ ಯಾತ್ರೆ ವೇಳೆ ರಕ್ಷಣೆ ಕೊಡಬೇಕು ಎಂದು ತಿಳಿಸಿದ್ದಾರೆ. ಅವರು ತಂಗುವ ಜಾಗ ಅಧಿಕೃತ ಆಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಜೈನ ಸ್ವಾಮೀಜಿ ಶಾಲಾ ಕಾಲೇಜುಗಳಲ್ಲಿ ಉಳಿದುಕೊಳ್ಳುತ್ತಾರೆ. ಈ ವಿಚಾರವಾಗಿ ನಾನು ಸಚಿವ ಮಧು ಬಂಗಾರಪ್ಪ ಅವರ ಜೊತೆಗೆ ಮಾತಾಡುತ್ತೇನೆ. ಜೈನ ಮಂಡಳಿ ಮಾಡಬೇಕು ಎಂದು ಹೇಳಿದ್ದು, ಈಗಾಗಲೇ ಹಿಂದುಳಿದ ವರ್ಗಗಳ ಮಂಡಳಿ ನಿಮಗ ಇದೆ. ಅದರಂತೆ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಜೈನ ಸಮುದಾಯದ ಮಂಡಳಿ ಮಾಡಲು ಕ್ರಮಕ್ಕೆ ನಿರ್ಧಾರ ಕೈಗೊಳ್ಳುತ್ತೇವೆ. ಬಜೆಟ್ ಮೊದಲೆ ಆಗಿದ್ದರೆ ನಾವು ಪ್ರಕಟಣೆ ಮಾಡುತ್ತಿದ್ದೆವು. ಜೈನ ಮಂದಿರಗಳಿಗೆ ರಕ್ಷಣೆ ಕೊಡಬೇಕು ಎಂದಿದ್ದು, ನಾವು ಜೈನ ಮಂದಿರಗಳಿಗೆ ರಕ್ಷಣೆ ಕೊಡುತ್ತೇವೆ ಎಂದರು.
ರಾಜ್ಯದಲ್ಲಿ ಇಂತಹ ಘಟನೆ ಆಗಬಾರದು. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ಘೋರ ಹತ್ಯೆಯನ್ನು ಪ್ರಪಂಚ ಗಮನಿಸುತ್ತಿದೆ. ಇದಕ್ಕೆ ರಾಜಕೀಯ ಬಣ್ಣ ಕೊಡಬಾರದು. ಯಾರು ಗಂಭೀರ ಕೃತ್ಯ ಮಾಡಿದ್ದಾರೆ ಎನ್ನುವುದು ತನಿಖೆಯಲ್ಲಿ ಗೊತ್ತಾಗುತ್ತದೆ ಎಂದು ಹೇಳಿದರು.
ಹತ್ಯೆಯ ಆರೋಪಿಗಳನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸುತ್ತ, ಜನಪ್ರತಿನಿಧಿಗಳು ಯಾರೂ ಕೂಡಾ ಹೀಗೆ ಮಾತಾಡಬಾರದು. ಜೈನ ಮುನಿ ಹತ್ಯೆಯನ್ನು ಸಿಬಿಐಗೆ ವಹಿಸುವ ಅನಿವಾರ್ಯತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಚಿಕ್ಕೋಡಿಯ ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಆಚಾರ್ಯ ಶ್ರೀ ೧೦೮ ಕಾಮಕುಮಾರ ಮಹಾರಾಜರ ಹತ್ಯೆ ಹಿನ್ನೆಲೆಯಲ್ಲಿ ವರೂರಿನ ಜೈನಮುನಿಗಳಾದ ಆಚಾರ್ಯ ಶ್ರೀ ಗುಣಧರ ನಂದಿ ಮಹಾರಾಜರು ಸರ್ಕಾರ ರಕ್ಷಣೆ ನೀಡುವಂತೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡ ಹಿನ್ನೆಲೆಯಲ್ಲಿ ಇಲ್ಲಿಗೆ ಭೇಟಿ ನಿಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ರಕ್ಷಣೆ ನೀಡುವ ಭರವಸೆಯನ್ನು ಶ್ರೀಗಳಿಗೆ ನೀಡಿ ಸಾಂತ್ವನ ಹೇಳಿದರು. ಆಮರಣ ಉಪವಾಸ ಕೈಬಿಡುವಂತೆ ಅವರು ಮನವಿ ಮಾಡಿದರು.

ಸಿಬಿಐ ತನಿಖೆಗೆ ಪರಂ ನಕಾರ

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಇತರೆ ಯಾವುದೆ ತನಿಖಾ ಸಂಸ್ಥೆಗೆ ಕೊಡುವ ಅಗತ್ಯವಿಲ್ಲ. ನಮ್ಮ ಪೊಲೀಸ್ ಇಲಾಖೆಯವರು ತನಿಖೆಗೆ ಸಮರ್ಥರಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈನಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿ ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಇಲಾಖೆಯ ತನಿಖೆ ಮುಗಿದ ಮೇಲೆ ಸತ್ಯಾಸತ್ಯತೆ ಏನೆಂಬುದು ತಿಳಿದುಬರುತ್ತೆ. ಈ ನಿಟ್ಟಿನಲ್ಲಿ ಸುಮ್ಮನೆ ಆಪಾದನೆ ಮಾಡುವುದು ಸರಿಯಲ್ಲ. ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.ಹತ್ಯೆ ತನಿಖೆಯಲ್ಲಿ ತಾರತಮ್ಯದ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇಂತಹ ಘಟನೆ ನಡೆದಾಗ ಯಾರು ಕೂಡಾ ತಾರತಮ್ಯ ಮಾಡುವುದಕ್ಕೆ ಹೋಗುವುದಿಲ್ಲ. ಅಪರಾಧಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಕೆಲಸ ಪೊಲೀಸರು ಮಾಡುತ್ತಾರೆ. ಇದು ಸ್ವಾಭಾವಿಕವಾಗಿ ಆಗುವ ಪದ್ಧತಿ. ಅದರಲ್ಲಿ ತಾರತಮ್ಯದ ಪ್ರಶ್ನೆ ಬರುವುದಿಲ್ಲ ಎಂದರು.ಘಟನೆ ನಡೆದ ಬಳಿಕ ಪೊಲೀಸರಿಗೆ ಮಾಹಿತಿ ತಿಳಿದು ದೂರು ಬಂದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾಗಿದ್ದರು. ಬೋರವೆಲ್ ನಲ್ಲಿ ಹಾಕಿದಂತ ದೇಹವನ್ನು ತೆಗೆಸಿ ಕ್ರಮ ಕೈಗೊಂಡಿದ್ದಾರೆ. ನಮ್ಮ ಇಲಾಖೆಗೆ ಅಭಿನಂದನೆ ಹೇಳುತ್ತೇನೆ ಎಂದರು.ಹುಬ್ಬಳ್ಳಿಯ ವರೂರಿನ ಜೈನ್ ಮುನಿಗಳು ಉಪವಾಸ ಮಾಡಿದ್ದರು, ಈ ವಿಷಯಕ್ಕೆ ಸಂಬಂಧಿಸಿದಂತೆ ಅವರೊಂದಿಗೆ ನಿನ್ನೆ ನಾನು ಮಾತನಾಡಿದ್ದೇನೆ. ಅವರ ಬೇಡಿಕೆಯನ್ನು ಕೇಳಿ ಭರವಸೆ ಕೊಡುವುದಕ್ಕೆ ಬಂದಿದ್ದೇವೆ ಎಂದರು.ಬಿಜೆಪಿಯಲ್ಲಿ ಒಳಜಗಳವಿದೆ. ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡುವುದಕ್ಕೆ ಅವರಿಗೆ ಆಗುತ್ತಿಲ್ಲ. ವಿರೋಧ ಪಕ್ಷದ ನಾಯಕ ಇಲ್ಲದೇ ಸದನ ನಡಸುತ್ತಿರುವುದನ್ನು ನೋಡುತ್ತಿದ್ದರೆ ಅವರ ಅಂತರಿಕ ಜಗಳ ತೋರಿಸುತ್ತದೆ ಎಂದು ಟೀಕಿಸಿದರು.