ಸಿಬಿಐ ತಂಡದಲ್ಲಿ ಮಹಿಳೆಯರಿಗೆ ಸಿಂಹಪಾಲು

ಮಣಿಪುರ ಹಿಂಸಾಚಾರ
ನವದೆಹಲಿ,ಆ.೧೭- ಮಣಿಪುರ ಹಿಂಸಾಚಾರ ಪ್ರಕರಣಗಳ ತನಿಖೆ ಕೈಗೊಂಡಿರುವ ಸಿಬಿಐ ೨೯ ಮಹಿಳಾ ಆಧಿಕಾರಿಗಳು ಸೇರಿದಂತೆ ೫೩ ಅಧಿಕಾರಿಗಳನ್ನು ತನಿಖೆಗೆ ನಿಯೋಜಿಸಿದೆ.ಮೂವರು ಡಿಐಜಿಗಳಾದ ಲವ್ಲಿ ಕಟಿಯಾರ್, ನಿರ್ಮಲಾ ದೇವಿ ಮತ್ತು ಮೋಹಿತ್ ಗುಪ್ತಾ ಮತ್ತು ಪೋಲಿಸ್ ವರಿಷ್ಠಾಧಿಕಾರಿ ರಾಜ್‌ವೀರ್ ಅವರನ್ನು ಒಳಗೊಂಡ ತಂಡ ಜಂಟಿ ನಿರ್ದೇಶಕ ಘನಶ್ಯಾಮ್ ಉಪಾಧ್ಯಾಯ ಅವರಿಗೆ ವರದಿ ಮಾಡಲಿದ್ದು, ಒಟ್ಟಾರೆ ತನಿಖೆಯ ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಷ್ಟು ದೊಡ್ಡ ಸಂಖ್ಯೆಯ ಮಹಿಳಾ ಅಧಿಕಾರಿಗಳನ್ನು ಏಕಕಾಲದಲ್ಲಿ ತನಿಖೆಗೆ ನಿಯೋಜನೆ ಮಾಡಿರುವುದು ಇದೇ ಮೊದಲ ಎಂದು ಹೇಳಲಾಗಿದೆ.
ಸಿಬಿಐ ತನಿಖೆ ನಡೆಸುತ್ತಿರುವ ಈ ಹಲವು ಪ್ರಕರಣಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ, ೧೯೮೯ ರ ನಿಬಂಧನೆ ಪರಿಶೀಲನೆ ಸೇರಿದಂತೆ ಮಹಿಳೆಯ ಮೇಲಿನ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆ ಸೇರಿದಂತೆ ಇನ್ನಿತರೆ ಹಿಂಸಾಚಾರ ಪ್ರಕರಣಗಳ ತನಿಖೆಯೂ ಸೇರಿವೆ ಎಂದು ಮೂಲಗಳು ತಿಳಿಸಿವೆ,
ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಆರು ಮಂದಿ ಉಪ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿದ್ದು ಎಲ್ಲರೂ ಮಹಿಳೆಯರಾಗಿದ್ದಾರೆ. ಒಟ್ಟಾರೆ ೫೩ ತನಿಖಾ ಸದಸ್ಯರ ಪಡೆ ಮಣಿಪುರದ ಹಿಂಸಾಚಾರ ಪ್ರಕರಣಕ್ಕೆ ನೈಜ ಮಾಹಿತಿ ಕಲೆ ಹಾಕಲು ಮುಂದಾಗಿದೆ.
ತನಿಖಾ ತಂಡದಲ್ಲಿ ೧೬ ಇನ್ಸ್‌ಪೆಕ್ಟರ್‌ಗಳು ಮತ್ತು ೧೦ ಸಬ್‌ಇನ್‌ಸ್ಪೆಕ್ಟರ್‌ಗಳು ಸಹ ತಂಡದ ಭಾಗವಾಗಲಿದ್ದಾರೆ. ಸಾಮಾನ್ಯವಾಗಿ ಇಷ್ಟು ದೊಡ್ಡ ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸಿದಾಗ, ಮಾನವಶಕ್ತಿಯನ್ನು ಒದಗಿಸಲು ಸಂಸ್ಥೆ ಸಂಬಂಧಪಟ್ಟ ರಾಜ್ಯದ ಮೇಲೆ ಅವಲಂಬಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಮಣಿಪುರದ ಪ್ರಕರಣದಲ್ಲಿ, ತನಿಖೆಯಲ್ಲಿ ಪಕ್ಷಪಾತದ ಯಾವುದೇ ಆರೋಪ ತಪ್ಪಿಸಲು ಸ್ಥಳೀಯ ಅಧಿಕಾರಿಗಳ ಪಾತ್ರ ಕಡಿಮೆ ಮಾಡಲು ಸಿಬಿಐ ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

೧೭ ಪ್ರಕರಣ ದಾಖಲು
ಮಣಿಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ೧೭ ಪ್ರಕರಣ ದಾಖಲಿಸಿದೆ, ಮೇ ೪ ರಂದು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಎರಡು ಪ್ರಕರಣಗಳು ಸೇರಿದಂತೆ ಹಲವು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದೆ.
ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ಇನ್ನೂ ಒಂಬತ್ತು ಪ್ರಕರಣಗಳನ್ನು ತನಿಖೆ ಮಾಡಲು ಸಿಬಿಐ ಸಜ್ಜಾಗಿದೆ, ಇದು ಸಂಸ್ಥೆಯಿಂದ ತನಿಖೆ ನಡೆಸುತ್ತಿರುವ ಒಟ್ಟು ಪ್ರಕರಣಗಳ ಸಂಖ್ಯೆಯನ್ನು ೧೭ ಕ್ಕೆ ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರೀಯ ಸಂಸ್ಥೆಯ ತನಿಖೆ ಈ ೧೭ ಪ್ರಕರಣಗಳಿಗೆ ಸೀಮಿತವಾಗಿರುವುದಿಲ್ಲ. ತನಿಖಾ ಹಂತದಲ್ಲಿ ಅನುಮಾನ ವ್ಯಕ್ತವಾಗುವ ಎಲ್ಲಾ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲು ಮುಂದಾಗಿದೆ ಎಂದು ಹೇಳಲಾಗಿದೆ.