ಸಿಬಿಐನಿಂದ ಸತ್ಯ ಬಹಿರಂಗ

ಮಂಗಳೂರು, ನ. ೫- ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶ್‌ಗೌಡ ಕೊಲೆ ಪ್ರಕರಣದ ಸಿಬಿಐ ತನಿಖೆಯಿಂದ ಸತ್ಯ ಹೊರಗೆ ಬರಲಿದೆ. ಈ ಮೂಲಕ ಯೋಗೇಶ್‌ಗೌಡ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಯಡಿಯೂರಪ್ಪ ವ್ಯಕ್ತಪಡಿಸಿದರು.
ಮಂಗಳೂರಿ ನಲ್ಲಿಂದು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸಿಬಿಐ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪವನ್ನು ಯಾರೂ ಮಾಡುತ್ತಿಲ್ಲ. ನಿಸ್ಪಕ್ಷಪಾತವಾಗಿ ತನಿಖೆ ನಡೆದಿದೆ. ಯೋಗೇಶ್‌ಗೌಡ ಕುಟುಂಬದವರು ಸಾಕಷ್ಟು ನೋವು ಅನುಭವಿಸಿದ್ದಾರೆ. ಇದೀಗ ಸಿಬಿಐ ತನಿಖೆಯಿಂದ ಕೊಲೆ ಹಿಂದಿನ ರಹಸ್ಯ ಹೊರಬರಲಿದೆ ಎಂದರು. ಆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ವಿಚಾರಣೆ ಮೊದಲೇ ಆಗಬೇಕಿತ್ತು. ಈಗ ಸಾಕ್ಷ್ಯ ಸಿಕ್ಕಿರುವುದರಿಂದ ಸಿಬಿಐ ಅವರನ್ನು ವಶಕ್ಕೆ ಪಡೆದಿದೆ. ಇದರಲ್ಲಿ ದ್ವೇಷ ರಾಜಕಾರಣ ಏನಿದೆ ಎಂದು ಅವರು ಪ್ರಶ್ನಿಸಿದರು. ಯೋಗೇಶ್‌ಗೌಡ ಹತ್ಯೆ ಪ್ರಕರಣದಲ್ಲಿ ಸರಿಯಾದ ದಿಕ್ಕಿನಲ್ಲಿ ಸಿಬಿಐ ತನಿಖೆ ನಡೆದಿದೆ. ಈಗಾಗಲೇ ಹಲವರ ವಿಚಾರಣೆ ನಡೆದಿದೆ. ಈಗ ಅವರಿಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಸಂಬಂಧಿಸಿದಂತೆ ಸಾಕ್ಷ್ಯ ಸಿಕ್ಕಿರಬಹುದು ಹಾಗಾಗಿ ಅವರ ಬಂಧನ ನಡೆದಿದೆ. ಇದನ್ನು ದ್ವೇಷ ರಾಜಕಾರಣ ಎಂದರೆ ಹೇಗೆ ಎಂದರು.
ಸಿಬಿಐ ತನಿಖೆ ಹೊಸದೇನು ಅಲ್ಲ. ಸುಮ್ಮನೆ ಇದನ್ನು ರಾಜಕಾರಣ ಮಾಡುವುದು ಬೇಡ ಎಂದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಬಿಜೆಪಿಗೆ ಸೇರುತ್ತಾರೆ ಎಂಬುದು ಶುದ್ಧ ಸುಳ್ಳು ಎಂದು ಮುಖ್ಯಮಂತ್ರಿಗಳು ಹೇಳಿ, ವಿನಯ್ ಕುಲಕರ್ಣಿ ಬಿಜೆಪಿ ಸೇರ್ಪಡೆ ಇಲ್ಲ ಎಂದು ಸ್ಪಷ್ಟಪಡಿಸಿದರು.