ಸಿಬಿಐನಿಂದ ಎಫ್‌ಐಆರ್

ವಾಲ್ಮೀಕಿ ನಿಗಮ ಹಗರಣ

ಬೆಂಗಳೂರು,ಜೂ.೫- ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ(ಸಿಬಿಐ) ಎಫ್‌ಐಆರ್ ದಾಖಲಿಸಿಕೊಂಡಿದೆ.ಯೂನಿಯನ್ ಬ್ಯಾಂಕ್ ನ ಎಂ.ಜಿ.ರಸ್ತೆ ಶಾಖೆಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಮಹೇಶ್ ಜೆ. ಅವರು ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲು ಮುಂದಾಗಿದೆ.ಯೂನಿಯನ್ ಬ್ಯಾಂಕ್ ಶಾಖೆಯ ಹಿಂದಿನ ಮುಖ್ಯಸ್ಥರಾದ ಸುಚಿಸ್ಮಿತಾ ರೌಲ್, ದೀಪಾ ಡಿ., ಹಿಂದಿನ ಕ್ರೆಡಿಟ್ ಆಫೀಸರ್ ಕೆ.ವಿ. ಕೃಷ್ಣಮೂರ್ತಿ ಹಾಗೂ ಇಬ್ಬರು ಖಾಸಗಿ ವ್ಯಕ್ತಿಗಳು ಸೇರಿದಂತೆ ಐವರ ವಿರುದ್ಧ ಕೇಸ್ ದಾಖಲಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಅನುದಾನದ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದ್ದ ಅದರ ಅಧೀಕ್ಷಕ ಚಂದ್ರಶೇಖರನ್ ಡೆತ್‌ನೋಟ್ ಬರೆದಿಟ್ಟು ಕಳೆದ ಮೇ ೨೬ ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಚಂದ್ರಶೇಖರನ್ ಅವರ ಪತ್ನಿಯ ದೂರಿನ ಅನ್ವಯ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಲ್ಲದೇ, ನಿಗಮದಲ್ಲಿ ಅನುದಾನದ ಹಣವು ಬ್ಯಾಂಕ್ ಮೂಲಕ ದುರ್ಬಳಕೆ ಆಗಿರುವುದಾಗಿ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರು ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೂಡ ಪ್ರಕರಣ ದಾಖಲಾಗಿದೆ.
ಆರೋಪಿತರು ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತದ ಖಾತೆಗಳಿಂದ ಅಕ್ರಮ ಹಣ ವರ್ಗಾವಣೆ, ಮೊತ್ತವನ್ನು ಹಿಂತೆಗೆದುಕೊಳ್ಳುವ ಮೂಲಕ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಅಲ್ಲದೇ, ನಿಗಮದಲ್ಲಿ ಅನುದಾನದ ಹಣವು ಬ್ಯಾಂಕ್ ಮೂಲಕ ದುರ್ಬಳಕೆ ಆಗಿರುವುದಾಗಿ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರು ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೂಡ ಪ್ರಕರಣ ದಾಖಲಾಗಿದೆ.
ಪ್ರಕರಣದ ಸಮಗ್ರ ತನಿಖೆಗಾಗಿ ಕಳೆದ ಮೇ.೩೧ ರಂದು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಆದೇಶ ಹೊರಡಿಸಿತ್ತು. ಮತ್ತೊಂದೆಡೆ, ಅಕ್ರಮದ ಕುರಿತು ತನಿಖೆ ನಡೆಸುವಂತೆ ಯೂನಿಯನ್ ಬ್ಯಾಂಕ್‌ನ ಎಂ.ಜಿ. ರಸ್ತೆ ಶಾಖೆಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಸಿಬಿಐಗೆ ದೂರು ನೀಡಿದ್ದರು.