ಸಿಬಿಐ,ಇಡಿ ದರ್ಬಳಕೆ :ಪ್ರತಿ ಪಕ್ಷಗಳ ಅರ್ಜಿ ಆಲಿಸಲು ಸುಪ್ರೀಂ ನಿರಾಕರಣೆ

ನವದೆಹಲಿ,ಏ.5- ದೇಶದಲ್ಲಿ ಸ್ವಾಯತ್ತ ಸಂಸ್ಥೆಗಳಾದ ಸಿಬಿಐ, ಇಡಿ ಸೇರಿದಂತೆ ಮತ್ತಿತರ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸೇರಿಸಂತೆ 14 ರಾಜಕೀಯ ಪಕ್ಷಗಳು ಸಲ್ಲಿಸಿದ್ದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ

ಕೇಂದ್ರ ತನಿಖಾ ಸಂಸ್ಥೆಗಳು ವಿರೋಧ ಪಕ್ಷದ ನಾಯಕರನ್ನು ಅನಿಯಂತ್ರಿತವಾಗಿ ಬಂಧಿಸಿದ್ದಾರೆ ಮತ್ತು ಬಂಧನ ಮತ್ತು ಬಂಧನ ನಿಯಂತ್ರಿಸುವ ಹೊಸ ಮಾರ್ಗಸೂಚಿ ಕೋರಿ ಕಾಂಗ್ರೆಸ್ ನೇತೃತ್ವದ 14 ಪಕ್ಷಗಳು ಜಂಟಿಯಾಗಿ ಸಲ್ಲಿಸಿದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠ,”ಸತ್ಯಗಳಿಗೆ ಸಂಬಂಧಿಸದೆ ಸಾಮಾನ್ಯ ಮಾರ್ಗಸೂಚಿಗಳನ್ನು ಹಾಕುವುದು ವಾಡಿಕೆ ಎಂದು ಹೇಳಿ ವಿರೋದ ಪಕ್ಷಗಳ ಮನವಿ ತಳ್ಳಿ ಹಾಕಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಸಾಮೂಹಿಕ ಬಂಧನಗಳು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಮತ್ತು ಸರ್ವಾಧಿಕಾರದ ಸಂಕೇತವಾಗಿದೆ ಎಂದು ವಾದಿಸಿದರು

ಇದಕ್ಕೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು, ‘ಪ್ರತಿಪಕ್ಷಗಳ ಜಾಗ ಕುಗ್ಗಿದೆ ಎಂದು ಹೇಳುವಾಗ ಅದಕ್ಕೆ ಪರಿಹಾರ ಇರುವುದು ರಾಜಕೀಯ ಜಾಗದಲ್ಲಿಯೇ ಹೊರತು ನ್ಯಾಯಾಲಯದಲ್ಲಿ ಅಲ್ಲ ಎಂದು ಹೇಳಿದ್ದಾರೆ.

ಮನವಿಯನ್ನು ಪುರಸ್ಕರಿಸುವಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರಾಸಕ್ತಿಯನ್ನು ಮನಗಂಡ ರಾಜಕೀಯ ಪಕ್ಷಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಅರ್ಜಿಯನ್ನು ಹಿಂಪಡೆಯಲು ಅನುಮತಿ ಕೋರಿದರು.

“ಈ ಹಂತದಲ್ಲಿ ಅರ್ಜಿಯನ್ನು ಹಿಂಪಡೆಯಲು ಕಲಿಕ ವಕೀಲರು ಅನುಮತಿ ಕೋರಿದ್ದಾರೆ. ಅದರಂತೆ ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ವಜಾಗೊಳಿಸಲಾಗಿದೆ” ಎಂದು ಪೀಠ ಆದೇಶಿಸಿದೆ.

“ನೀವು ವೈಯಕ್ತಿಕ ಕ್ರಿಮಿನಲ್ ಪ್ರಕರಣ ಅಥವಾ ಪ್ರಕರಣಗಳ ಗುಂಪನ್ನು ಹೊಂದಿರುವಾಗ ದಯವಿಟ್ಟು ನಮ್ಮ ಬಳಿಗೆ ಬನ್ನಿ” ಎಂದು ಪೀಠ ಹೇಳಿದೆ.

ವಿರೋಧ ಪಕ್ಷದ ನಾಯಕರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳು ಗರಿಷ್ಠ ಸಂಖ್ಯೆಯ ಪ್ರಕರಣಗಳನ್ನು ತೋರಿಸುವ ಅಂಕಿಅಂಶಗಳ ಆಧಾರದ ಮೇಲೆ ರಾಜಕಾರಣಿಗಳಿಗೆ ಮಾತ್ರ ಮಾರ್ಗಸೂಚಿಗಳನ್ನು ಕೇಳಲಾಗುವುದಿಲ್ಲ ಏಕೆಂದರೆ ಅವರು ಪ್ರಾಸಿಕ್ಯೂಷನ್‌ನಿಂದ ಯಾವುದೇ ವಿನಾಯಿತಿಯನ್ನು ಅನುಭವಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಕಾಂಗ್ರೆಸ್ ಹೊರತಾಗಿ, ಡಿಎಂಕೆ, ಆರ್‌ಜೆಡಿ, ಬಿಆರ್‌ಎಸ್, ತೃಣಮೂಲ ಕಾಂಗ್ರೆಸ್, ಎಎಪಿ, ಎನ್‌ಸಿಪಿ, ಶಿವಸೇನೆ (ಯುಬಿಟಿ), ಜೆಎಂಎಂ, ಜೆಡಿ(ಯು), ಸಿಪಿಐ(ಎಂ), ಸಿಪಿಐ, ಸಮಾಜವಾದಿ ಪಕ್ಷಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದವು.