ಸಿಬಿಎಸ್‍ಇಯಂತೆ ಪಿಯುಸಿ ದ್ವಿತೀಯ ಪರೀಕ್ಷೆ ರದ್ದತಿಗೆ ಕಾಂಗ್ರೆಸ್ ಒತ್ತಾಯ

ಕಲಬುರಗಿ.ಜೂ.2:ಮಹಾಮಾರಿ ಕೋವಿಡ್ ಎರಡನೇ ಅಲೆಯ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಿಬಿಎಸ್‍ಇ ಪರೀಕ್ಷೆಯನ್ನು ರದ್ದುಪಡಿಸಿದ್ದು ಸ್ವಾಗತಾರ್ಹವಾಗಿದೆ. ಅದೇ ರೀತಿ ಕರ್ನಾಟಕ ಸರ್ಕಾರವೂ ಸಹ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಪಡಿಸಬೇಕು ಎಂದು ಮಾಜಿ ಸಚಿವ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರ ಡಾ. ಶರಣಪ್ರಕಾಶ್ ಪಾಟೀಲ್ ಅವರು ಒತ್ತಾಯಿಸಿದರು.
ಬುಧವಾರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಒಬ್ಬ ವೈದ್ಯನಾಗಿ ಕೇಂದ್ರ ಸರ್ಕಾರವು ಪರೀಕ್ಷೆ ರದ್ದು ಮಾಡಿರುವುದನ್ನು ಸ್ವಾಗತಿಸುತ್ತೇನೆ ಎಂದರು.
ಮಹಾಮಾರಿ ಕೋವಿಡ್ ಎರಡನೇ ಅಲೆಯ ಸೋಂಕು ವಿದ್ಯಾರ್ಥಿಗಳ ಮೇಲೆ ವ್ಯಾಪಕವಾಗಿ ಹರಡುತ್ತಿದೆ. ಇಂತಹ ಅಪಾಯಕಾರಿ ಸ್ಥಿತಿಯಲ್ಲಿ ಸಿಬಿಎಸ್‍ಇ ಪರೀಕ್ಷೆಯನ್ನು ನಡೆಸಿದ್ದರೆ ಸಮಸ್ಯೆ ಆಗುತ್ತಿತ್ತು. ಅಂತಹ ಅಪಾಯವನ್ನು ತಪ್ಪಿಸುವ ದಿಸೆಯಲ್ಲಿ ಪರೀಕ್ಷೆ ರದ್ದುಪಡಿಸಿದ್ದು ಒಳ್ಳೆಯದು ಎಂದು ಅವರು ಹೇಳಿದರು.
ಈಗಲೂ ಸಹ ಕೋವಿಡ್ ಲಸಿಕೆಯನ್ನು ಸಮರ್ಪಕವಾಗಿ ಒದಗಿಸಲು ಸರ್ಕಾರಗಳಿಗೆ ಆಗುತ್ತಿಲ್ಲ. ಮಕ್ಕಳಿಗಂತೂ ಲಸಿಕೆ ಇಲ್ಲ. ಇಂತಹ ಸಂದರ್ಭದಲ್ಲಿಯೇ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸಹ ನಡೆಸುವುದು ಅತ್ಯಂತ ಅಪಾಯಕಾರಿ. ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಮೂರನೇ ಅಲೆಯ ಸೋಂಕು ಎದುರಿಸುವ ಹಿನ್ನೆಲೆಯಲ್ಲಿ ಕೂಡಲೇ ರಾಜ್ಯ ಸರ್ಕಾರವು ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದರು.