ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗೆ ರಾಜ್ಯಗಳ ಸಮ್ಮತಿ

ನವದೆಹಲಿ, ಮೇ ೨೭- ಸಿಬಿಎಸ್ ಇ ೧೨ನೇ ತರಗತಿಗೆ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಬಹುತೇಕ ರಾಜ್ಯಗಳು ಸಹಮತ ವ್ಯಕ್ತಪಡಿಸಿವೆ. ಆದರೆ, ಪರೀಕ್ಷೆಗೆ ಮುನ್ನ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಮೊದಲ ಡೋಸ್ ಲಸಿಕೆ ನೀಡಬೇಕೆಂದು ಸಲಹೆ ಮಾಡಿವೆ.
ಕಳೆದವಾರ ಸಿಬಿಎಸ್ ಇ ೧೨ನೇ ತರಗತಿಗೆ ಪರೀಕ್ಷೆ ನಡೆಸುವ ಸಂಬಂಧ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ನೇತೃತ್ವದಲ್ಲಿ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರ ಸಭೆಯಲ್ಲಿ ತಮ್ಮ ಅಭಿಪ್ರಾಯ ತಿಳಿಸುವಂತೆ ಸೂಚಿಸಲಾಗಿತ್ತು.
ಕೇಂದ್ರಾಡಳಿತ ಪ್ರದೇಶ ಸೇರಿದಂತೆ ೩೨ ರಾಜ್ಯಗಳ ಪೈಕಿ ೨೯ ರಾಜ್ಯಗಳು ಪರೀಕ್ಷೆ ನಡೆಸುವ ಕೇಂದ್ರ ಸರ್ಕಾರ ಪ್ರಸ್ತಾವಕ್ಕೆ ಬೆಂಬಲ ಸೂಚಿಸಿವೆ. ಆದರೆ, ದೆಹಲಿ, ಮಹಾರಾಷ್ಟ್ರ, ಗೋವಾ, ಅಂಡಮಾನ್ ಮತ್ತು ನಿಖೋಬಾರ್ ಪೆನ್ನು ಮತ್ತು ಪೇಪರ್ ಪರೀಕ್ಷೆಗಳಿಗೆ ವಿರೋಧ ವ್ಯಕ್ತಪಡಿಸಿದೆ.
೩೨ ರಾಜ್ಯಗಳ ಪೈಕಿ ೨೯ ರಾಜ್ಯಗಳು ಪರೀಕ್ಷೆಗೆ ಬೆಂಬಲ ವ್ಯಕ್ತಪಡಿಸಿ ಈ ಆಯ್ಕೆಗೆ ಒಪ್ಪಿಕೊಂಡಿವೆ. ರಾಜಾಸ್ತಾನ, ತ್ರಿಪುರಾ, ತೆಲಂಗಾಣ ರಾಜ್ಯಗಳು ಎ ಆಯ್ಕೆಗೆ ಒಪ್ಪಿಗೆ ಸೂಚಿಸಿದೆ.
ಸಿಬಿಎಸ್ ಇ ಎರಡು ಆಯ್ಕೆಗಳ ಪರೀಕ್ಷೆ ನಡೆಸುವ ಪ್ರಸ್ತಾಪ ಮುಂದಿಟ್ಟಿತ್ತು. ಸಿಬಿಎಸ್ ಇ ೧೨ನೇ ತರಗತಿಯಲ್ಲಿ ೧೯ ಪ್ರಮುಖ ವಿಷಯಗಳಿವೆ. ಈ ಆಯ್ಕೆಯಡಿ ೧೯ ಪ್ರಮುಖ ವಿಷಯಗಳಿಗೆ ಈಗಿರುವ ಪರೀಕ್ಷಾ ಮಾದರಿಯಲ್ಲೇ ನಿಯೋಜಿತ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸುವುದು.
ಕೇವಲ ಪ್ರಮುಖ ವಿಷಯಗಳ ಆಧಾರದ ಮೇಲೆ ಕಡಿಮೆ ವಿಷಯಗಳನ್ನು ಲೆಕ್ಕಾಚಾರ ಮಾಡುವುದಾಗಿದೆ. ಆದರೆ, ಮೂರು ರಾಜ್ಯಗಳು ಮಾತ್ರ ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದೆ.
ಎ ಆಯ್ಕೆಯಡಿ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ಬದಲಾಗಿ ತಾವು ಓದುತ್ತಿರುವ ಕಾಲೇಜುಗಳಲ್ಲೇ ಪರೀಕ್ಷೆ ನಡೆಸುವ ಪ್ರಸ್ತಾಪವಿದೆ. ಪ್ರತಿಯೊಂದು ಪರೀಕ್ಷೆಯ ಅವಧಿ ಮೂರು ತಾಸುಗಳಿಗೆ ಬದಲಾಗಿ ೯೦ ನಿಮಿಷಗಳಿಗೆ ಇಳಿಸುವ ಪ್ರಸ್ತಾವವು ಕೇಂದ್ರ ಸರ್ಕಾರ ಮುಂದಿಟ್ಟಿದೆ.
ಎಲ್ಲ ರಾಜ್ಯಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದು, ಈ ಆಧಾರದ ಮೇಲೆ ಸಿಬಿಎಸ್ ಇ ಪರೀಕ್ಷೆ ನಡೆಸುವ ಬಗ್ಗೆ ಜೂ. ೧ ರೊಳಗೆ ಕೇಂದ್ರ ಶಿಕ್ಷಣ ಸಚಿವಾಲಯ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ ತಿಂಗಳಿನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ.