ಸಿಬಿಎಸ್‌ಇ ಪರೀಕ್ಷೆ 2 ದಿನಗಳಲ್ಲಿ ನಿರ್ಧಾರ

ನವದೆಹಲಿ,ಮೇ ೩೧- ಸಿಬಿಎಸ್‌ಇ ೧೨ನೇ ತರಗತಿಯ ಪರೀಕ್ಷೆಗಳನ್ನು ನಡೆಸಬೇಕೋ ಬೇಡವೋ ಎಂಬ ಬಗ್ಗೆ ಇನ್ನೆರೆಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ನೀಡಿರುವ ಮಾಹಿತಿಗೆ ಸುಪ್ರೀಂಕೋರ್ಟ್ ಅಸ್ತು ಎಂದಿದೆ.
ಸಿಬಿಎಸ್‌ಇಯ ೧೨ನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಲು ಆದೇಶ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಇಂದು ಕೇಂದ್ರ ಸರ್ಕಾರ ಪರೀಕ್ಷೆ ನಡೆಸಬೇಕೇ ಬೇಡವೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಮಯ ಕೋರಿ ಗುರುವಾರದೊಳಗೆ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ನ್ಯಾಯಾಲಯಕ್ಕೆ ಹೇಳಿತು. ಇದಕ್ಕೆ ಸಮ್ಮತಿಸಿದ ಸುಪ್ರೀಂಕೋರ್ಟ್ ಗುರುವಾರದೊಳಗೆ ತೀರ್ಮಾನ ಕೈಗೊಳ್ಳಿ ಎಂದು ವಿಚಾರಣೆಯನ್ನು ಮುಂದೂಡಿದೆ.
ಕೊರೊನಾದ ಈ ಸಂಕಷ್ಟ ಸಂದರ್ಭದಲ್ಲಿ ಸಿಬಿಎಸ್‌ಇಯ ೧೨ನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಬೇಕೆಂದು ಕೋರಿ ವಕೀಲ ಮಮತಾ ಶರ್ಮಾ ಎಂಬುವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ವಿಶೇಷ ನ್ಯಾಯಪೀಠದ ನ್ಯಾಯಾಧೀಶರುಗಳಾದ ಎ.ಎಂ. ಖಾನ್ವಿಲ್‌ಕರ್ ಮತ್ತು ದಿನೇಶ್ ಮಹೇಶ್ವರಿ ಇವರುಗಳು ಕೈಗೆತ್ತಿಕೊಂಡಿದ್ದು, ಈ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪರ ವಕೀಲರು ಇನ್ನೆರೆಡು ದಿನಗಳಲ್ಲಿ ಪರೀಕ್ಷೆ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಜೂ. ೩ಕ್ಕೆ ಮುಂದೂಡಲಾಗಿದೆ.
ವಕೀಲೆ ಮಮತಾ ಶರ್ಮಾ ಸಿಬಿಎಸ್‌ಇಯ ೧೨ನೇ ತರಗತಿಯ ವಿದ್ಯಾರ್ಥಿಗಳ ಪರವಾಗಿ ಅರ್ಜಿ ಸಲ್ಲಿಸಿದ್ದು, ಈ ಸಾಂಕ್ರಾಮಿಕ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಲಕ್ಷಾಂತರ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕಾದ ಅಗತ್ಯವಿದೆ. ಹಾಗಾಗಿ, ೧೨ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿ ನಿಗದಿತ ಅವಧಿಯಲ್ಲಿ ಆಬ್ಜೆಕ್ಟಿವ್ ಮೆಥಡಾಲಜಿ ಮೇಲೆ ಫಲಿತಾಂಶಗಳನ್ನು ಪ್ರಕಟಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ದೇಶದಲ್ಲಿ ೧೨ನೇ ತರಗತಿಯ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಕಳೆದವಾರ ಕೇಂದ್ರದ ರಕ್ಷಣಾ ಸಚಿವರಾದ ರಾಜನಾಥ್‌ಸಿಂಗ್, ಮಾನವ ಸಂಪನ್ಮೂಲ ಸಚಿವ ರಮೇಶ್ ಪೊಕ್ರಿವಾಲ್ ಇವರುಗಳು ಎಲ್ಲ ರಾಜ್ಯಗಳ ಶಿಕ್ಷಣ ಸಚಿವರುಗಳ ಜತೆ ವೀಡಿಯೊ ಸಂವಾದ ನಡೆಸಿದ ಸಂದರ್ಭದಲ್ಲಿ ೧೨ನೇ ತರಗತಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಒಲವು ವ್ಯಕ್ತವಾಗಿತ್ತು. ಕೇಂದ್ರ ಸರ್ಕಾರ ಈ ಬಗ್ಗೆ ಜೂ. ೧ರ ನಂತರ ತೀರ್ಮಾನ ಕೈಗೊಳ್ಳುವುದಾಗಿ ಹೇಳಿತ್ತು. ನಡುವೆ ಸುಪ್ರೀಂಕೋರ್ಟ್‌ನಲ್ಲಿ ರದ್ದು ಮಾಡುವಂತೆ ಕೋರಿ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಸಿಬಿಎಸ್‌ಇ ಈಗಾಗಲೇ ೧೦ನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿ, ವಿದ್ಯಾರ್ಥಿಗಳನ್ನು ಹಿಂದಿನ ಪರೀಕ್ಷೆಗಳ ಮೌಲ್ಯಾಂಕದ ಮೇಲೆ ತೇರ್ಗಡೆ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.