ಸಿನಿಮಾ ಸಂಗೀತದಷ್ಟೇ ರಂಗ ಸಂಗೀತ ಜೀವಂತವಾಗಿದೆ -ವರಲಕ್ಷ್ಮೀ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ 27: ಇಂದಿನ  ಹೊಸ ತಲೆಮಾರಿಗೆ ಸಂಗೀತ ಎಂದಾಗ ಸಿನಿಮಾ ಸಂಗೀತ ಮಾತ್ರ ನೆನಪಾಗುತ್ತದೆ . ಆದರೆ ಜಾನಪದ, ಸುಗಮ , ಶಾಸ್ತ್ರೀಯ,ರಂಗ ಸಂಗೀತ ಮುಂತಾದ ಪ್ರಕಾರಗಳು ಕೂಡ ನಮ್ಮ ನಡುವೆ ಜೀವಂತವಾಗಿ ಉಳಿದಿವೆ ಎಂದು ಹಿರಿಯ ರಂಗಭೂಮಿ ಕಲಾವಿದೆ ಎಂ. ವರಲಕ್ಷ್ಮಿ ನುಡಿದರು.
ಅವರು ನಗರದ ಸರಳಾದೇವಿ ಕಾಲೇಜಿನಲ್ಲಿ ಆಂತರಿಕ  ಗುಣಮಟ್ಟ ಭರವಸೆ ಕೋಶ ಹಾಗೂ ನಾಟಕ ವಿಭಾಗದಿಂದ ನಿನ್ನೆ ಆಯೋಜಿಸಿದ್ದ  ‘ ರಂಗ ಸಂಗೀತ  : ವರ್ತಮಾನದ ಸಾಧ್ಯತೆಗಳು ‘ ಕುರಿತ  ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಸಂಗೀತ ದಿಗ್ಗಜರಾದ ಸಿರಿಗೇರಿ ನಾಗನಗೌಡ , ಮದಿರೆ ಮರಿಸ್ವಾಮಿ, ಕಂಪ್ಲಿ ವಾದಿರಾಜ ಮುಂತಾದವರೊಂದಿಗೆ ಈ ನೆಲದಲ್ಲಿ ಸುಭದ್ರಮ್ಮ ಮನ್ಸೂರ್ ,ಬೆಳಗಲು ವೀರಣ್ಣ, ವೀಣಾ ಆದೋನಿ ಮುಂತಾದವರು ಕೂಡ ರಂಗಗೀತೆಗಳನ್ನು ಭಾವಪೂರ್ಣವಾಗಿ ಹಾಡುತ್ತ ರಂಗ ಸಂಗೀತಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆಂದರು.
ವಿಷಯ ಮಂಡನೆ ಮಾಡಿದ ವಿ.ಎಸ್.ಕೆ. ವಿಶ್ವ ವಿದ್ಯಾಲಯದ ಪ್ರದರ್ಶನ ಕಲಾ ( ನಾಟಕ ) ವಿಭಾಗದ ಉಪನ್ಯಾಸಕರಾದ ಡಾ. ಅಣ್ಣಾಜಿ ಕೃಷ್ಣಾ ರೆಡ್ಡಿ ಯಾವುದೇ ನಾಟಕ ಸಂಗೀತವಿಲ್ಲದೆ ಪರಿಪೂರ್ಣವೆನಿಸುವುದಿಲ್ಲ . ಸಂಗೀತ ನಾಟಕದ ಜೀವನಾಡಿ . ಸಂಗೀತಕ್ಕೆ ಸಮ್ಮೋಹನ ಶಕ್ತಿ ಇದೆ. ಎಲ್ಲ ವಸ್ತು ಮತ್ತು ಎಲ್ಲ ಜೀವರಾಶಿಗಳನ್ನು ಆಕರ್ಷಿಸುವ ಶಕ್ತಿ ಸಂಗೀತಕ್ಕಿದೆ. ಭಾವನೆಗಳ ಅಭಿವ್ಯಕ್ತಿಗೆ ಸಂಗೀತವು ಪ್ರಬಲ ಮಾಧ್ಯಮವೆನಿಸಿದೆ .ಸಂಗೀತದ ಸಪ್ತ ಸ್ವರಗಳು ಒಂದು ರಸ ಭಾವವನ್ನು ಅಭಿವ್ಯಕ್ತಿಸುತ್ತವೆ . ಆ ಕಾರಣದಿಂದಲೇ ನಾಟಕದ ಅಭಿನಯ ಕಲೆ ಸಂಗೀತದ ಸಹಾಯದಿಂದ ಇನ್ನಷ್ಟು ಪ್ರಭಾವಪೂರ್ಣವಾಗವಲ್ಲದು ಎಂದು ಬಣ್ಣಿಸಿದರು.
ನಾಟಕಕ್ಕೂ ಮತ್ತು ಸಂಗೀತಕ್ಕೂ ಅವಿನಾಭಾವ ಸಂಬಂಧವಿದೆ . ರಂಗನಟರಿಗೆ ಶರೀರ ಮತ್ತು ಶಾರೀರ ಮುಖ್ಯ. ಹಿಂದಿನ ಕಾಲದ ರಂಗ ಸಂಗೀತಕ್ಕೂ ಮತ್ತು ಈ ಹೊತ್ತಿನ ಕಾಲದ ರಂಗ ಸಂಗೀತಕ್ಕೂ ತುಂಬ ವ್ಯತ್ಯಾಸವಿದೆ ಎಂದರು. ಸಾಹಿತ್ಯವನ್ನು ರಾಗಗಳಲ್ಲಿ ಸಂಯೋಜಿಸಿ ಪ್ರೇಕ್ಷಕರಿಗೆ ಅದರ ಸವಿಯನ್ನು ಉಣಬಡಿಸುವುದು ತುಂಬ ಕಷ್ಟದ ಕೆಲಸ . ಅಂತಹ ಯಶಸ್ವಿ ರಂಗ ಪ್ರಯೋಗಗಳನ್ನು ಆಧುನಿಕ ಕನ್ನಡ ರಂಗಭೂಮಿಯಲ್ಲಿ ನೋಡಬಹುದಾಗಿದೆ ಎಂದು ಆಶಾ ಭಾವನೆಯನ್ನು ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಾಟಕ ವಿಭಾಗದ ಮುಖ್ಯಸ್ಥ ಡಾ. ದಸ್ತಗೀರಸಾಬ್ ದಿನ್ನಿ 60 ಮತ್ತು 70 ರ ದಶಕಗಳಲ್ಲಿ ನಾಟಕಗಳಿಗೆ ಹಿನ್ನೆಲೆಗಾಗಿ ಹಾರ್ಮೋನಿಯಂ, ತಬಲಾ, ಕ್ಲಾರಿಯೋನೆಟ್, ಗಿಟಾರ್ ಬಳಸುತ್ತಿದ್ದರು. ಈಗ ವಿದ್ಯುನ್ಮಾನ ಕ್ಯಾಶಿಯೋವನ್ನು ಬಳಸುತ್ತಿದ್ದಾರೆ. ಇದರಲ್ಲಿ ಅನೇಕ ಬಗೆಯ ಸಂಗೀತದ ದ್ವನಿ ತರಂಗಗಳನ್ನು ಹೊಮ್ಮಿಸಬಹುದು. ಹಿಂದಿನ ಕಾಲದಲ್ಲಿ ನಟರೇ ಸ್ವತಃ ಹಾಡುಗಳನ್ನು ಹಾಡುತ್ತಿದ್ದರು. ಇಂದು ಆಡುವವರು ಬೇರೆ ಕುಣಿಯುವವರು ಬೇರೆ. ಇದೆಲ್ಲವೂ ವರ್ತಮಾನದ ಸಾಧ್ಯತೆ .. ಇಂದು ಸಂಗೀತದ ಇಂಪಿಗಿಂತ ಅಬ್ಬರವೇ ಜಾಸ್ತಿ ಆಗಿರುವುದು ವಿಷಾದದ ಸಂಗತಿ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಹೆಚ್ .ಕೆ. ಮಂಜುನಾಥ ರೆಡ್ಡಿ  ವಿದ್ಯಾರ್ಥಿಗಳು ರಂಗ ಸಂಗೀತದ ಪರಂಪರೆಯನ್ನು ಅಧ್ಯಯನದ ಮೂಲಕ ತಿಳಿದು ಕೊಳ್ಳಬೇಕು. ರಂಗಗೀತೆಗಳನ್ನು ದಾಖಲಿಸುವ ಮನಸ್ಸು ಮಾಡಬೇಕು.ಸೊರಗುತ್ತಿರುವ ರಂಗಭೂಮಿಯನ್ನು ಉಳಿಸಿ ಬೆಳೆಸಲು ಶ್ರಮಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಟಕ ವಿಭಾಗದ ಅತಿಥಿ ಉಪನ್ಯಾಸಕರಾದ ವಿಷ್ಣು ಹಡಪದ, ನೇತಿ ರಘುರಾಂ ಮತ್ತು ನಾಟಕ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.