ಸಿನಿಮಾಗಳಿಗೆ ವಿಧಿಸಿದ್ದ ನಿರ್ಬಂಧ ಸಡಿಲ

Film producers met minister sudakar surappa babu jayana k.p.srikanth regarding 100pect ocupent in theaters 

ಬೆಂಗಳೂರು, ಸೆ.೨೧- ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವಿಧಿಸಿರುವ ನಿಯಮಗಳನ್ನು ಸಂಪೂರ್ಣವಾಗಿ ಸಡಿಲಗೊಳಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ನೂರಕ್ಕೆ ನೂರರಷ್ಟು ಆಸನ, ನೈಟ್ ಕರ್ಫ್ಯೂ ರದ್ದು, ಅಪಾರ್ಟ್ಮೆಂಟ್‌ಗಳಲ್ಲಿ ಕಾರ್ಯಕ್ರಮ ಮದುವೆ ಸಮಾರಂಭಗಳಿಗೆ ಅವಕಾಶ ಸೇರಿದಂತೆ ಇನ್ನಿತರೆ ಚಟುವಟಿಕೆಗಳಿಗೆ ಮುಕ್ತ ಅವಕಾಶ ನೀಡಲು, ಎಂದಿನಂತೆ ವ್ಯಾಪಾರ ವಹಿವಾಟು ನಡೆಸಲು ಸರ್ಕಾರ ಹಸಿರು ನಿಶಾನೆ ತೋರಲು ಸರ್ಕಾರ ಮುಂದಾಗಿದೆ.

ಅಲ್ಲದೆ, ಈಗಾಗಲೇ ಸರ್ಕಾರಿ ನೌಕರರು, ಕೈಗಾರಿಕೆಗಳು, ಖಾಸಗಿ ಸಂಸ್ಥೆಗಳು ಶೇ ೧೦೦ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಮಾಲ್‌ಗಳನ್ನು ತೆರೆಯಬಹುದು. ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಭಕ್ತಿ ಸೇವೆಗೆ ಅವಕಾಶ ಇರುವುದಿಲ್ಲ. ಇದಕ್ಕೂ ಅವಕಾಶ ನೀಡಲು ಸರ್ಕಾರ ಉದ್ದೇಶಿಸಿದೆ.

ಇನ್ನೂ, ರಾತ್ರಿ ಕಾರ್ಯಾಚರಿಸುವ ಕೈಗಾರಿಕೆಗಳ ನೌಕರರು ಐಡಿ ಕಾರ್ಡ್ ತೋರಿಸಿ ಪ್ರಯಾಣಿಸಬಹುದು. ರಾತ್ರಿ ಕರ್ಪ್ಯೂ ಸಂದರ್ಭದಲ್ಲಿ ಅನುಮತಿಸಲಾದ ಚಟುವಟಿಕೆಗಳನ್ನು ಹೊರತುಪಡಿಸಿ ವಾಹನಗಳ ಅನಗತ್ಯ ಸಂಚಾರವನ್ನು ತಡೆದು ಪರಿಶೀಲನೆ ನಡೆಸಲಾಗುತ್ತಿದೆ. ಇದಕ್ಕೆಲ್ಲಾ ಬ್ರೇಕ್ ಹಾಕಲು ಸರ್ಕಾರ ನಿರ್ಧರಿಸಿದೆ.

ಸುಧಾಕರ್ ಭರವಸೆ
ಚಿತ್ರ ಮಂದಿರಗಳಲ್ಲಿ ಶೇ.೧೦೦ರಷ್ಟು ಸೀಟು ಭರ್ತಿಗೆ ಆರೋಗ್ಯ ಸಚಿವ ಕೆ.ಸುಧಾಕರ್ ಅವರು ನಿರ್ಮಾಪಕರಿಗೆ ಭರವಸೆ ನೀಡಿದ್ದಾರೆ.

ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ದೊಡ್ಡ ನಟರ ಸಿನಿಮಾಗಳು ಪ್ರದರ್ಶನಕ್ಕೆ ಸಿದ್ಧವಾಗಿವೆ. ಆದರೆ, ಶೇ.೫೦ರಷ್ಟು ಮಾತ್ರ ಸೀಟು ಭರ್ತಿಗೆ ಅವಕಾಶ ನೀಡಿರುವುದರಿಂದ ಸಮಸ್ಯೆಯಾಗುತ್ತಿದೆ. ಇದರಿಂದ ನಿರ್ಮಾಪಕರು ತುಂಬಾ ಸಂಕಷ್ಟದಲ್ಲಿ ಇದ್ದಾರೆ ಎಂದು ನಿರ್ಮಾಪಕರು ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ಚಿತ್ರ ನಿರ್ಮಾಪಕರು ಮನವಿ ಮಾಡಿದ್ದಾರೆ. ೧೦೦ ರಷ್ಟು ಸೀಟು ಭರ್ತಿಗೆ ಅವಕಾಶ ಸಲ್ಲಿಸಲು ಕೋರಿಕೆ ಸಲ್ಲಿಸಿದ್ದಾರೆ. ಆದರೆ, ಇನ್ನೆರಡು ದಿನದಲ್ಲಿ ಸಭೆ ನಡೆಸಿ ಈ ಬಗ್ಗೆ ತಿರ್ಮಾನ ಮಾಡಲಾಗುವುದು. ಜತೆಗೆ ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯ ಸಹಾ ಪಡೆಯಬೇಕು ಎಂದು ಹೇಳಿದರು.

ನಿರ್ಮಾಪಕ ಸೂರಪ್ಪ ಬಾಬು ಆರೋಗ್ಯ ಸಚಿವರ ಜೊತೆ ಮಾತನಾಡಿದ್ದೇವೆ. ಇನ್ನೊಂದು ಮೂರು ದಿನಗಳಲ್ಲಿ ಬಿಬಿಎಂಪಿ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚೆ ಮಾಡುತ್ತೇವೆ. ಸಭೆ ನಂತರ ಒಳ್ಳೆಯ ಸುದ್ದಿ ಸಿಗಲಿದೆ ಎಂದರು.

‘ನಿರ್ಬಂಧ ತೆರವು ಸರ್ಕಾರಕ್ಕೆ ಬಿಟ್ಟಿದ್ದು’
ಸಂಪೂರ್ಣವಾಗಿ ಎಲ್ಲಾ ಚಟುವಟಿಕೆಗಳನ್ನು ಅನುಮತಿ ನೀಡುವ ನಿರ್ಧಾರ ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂದುವರೆದ ದೇಶಗಳಾದ ಆಸ್ಟ್ರೇಲಿಯಾ, ಬ್ರೆಜಿಲ್ ಸೇರಿದಂತೆ ಇನ್ನಿತರೆ ದೇಶಗಳಲ್ಲಿ ಲಸಿಕೆ ಪಡೆದರೂ, ನಿರ್ಬಂಧ ಜಾರಿಯಲ್ಲಿದೆ.

ಹಾಗಾಗಿ ನಾವೂ ಸಹ ನೆರೆ ರಾಜ್ಯಗಳ ಪರಿಸ್ಥಿತಿ ನೋಡಿಕೊಂಡು, ಇಲ್ಲಿನ ಪಾಸಿಟಿವಿಟಿ ಪ್ರಮಾಣ ಗಮನದಲ್ಲಿಟ್ಟುಕೊಂಡು, ಹೆಜ್ಜೆ ಇಡಲಾಗುವುದು ಎಂದರು.

ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಹತೋಟಿಯಲ್ಲಿದೆ. ಜತೆಗೆ, ಲಸಿಕೆ ಕಾರ್ಯವೂ ಮತ್ತಷ್ಟು ಚುರುಕುಗೊಳಿಸಲಾಗಿದೆ ಎಂದ ಅವರು, ಸೋಂಕಿನಿಂದ ಬೆರಳೆಣಿಕೆಯಷ್ಟು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರು ತಿಳಿಸಿದರು.

ಅಪಾದನೆ: ಮಾರ್ಷಲ್ ಗಳು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎನ್ನುವ ಆರೋಪ ಕೇಳಿಬಂದರೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚನೆ ನೋಡಲಾಗಿದೆ ಎಂದು ಗೌರವ್ ಗುಪ್ತ ತಿಳಿಸಿದರು.