ಸಿದ್ರಾಂಪೂರು : ಭಾರೀ ಸಂಖ್ಯೆಯ ಪೈಪ್ ಸಂಗ್ರಹ – ಶಾಸಕರು ಭೇಟಿ

ನಗರ ವಿಧಾನಸಭಾ ಕ್ಷೇತ್ರ : ೧೪ ಗ್ರಾಮ ಕೆರೆ ತುಂಬುವ ಯೋಜನೆ
ರಾಯಚೂರು.ನ.೦೬- ನಗರ ವಿಧಾನಸಭಾ ಕ್ಷೇತ್ರದ ೧೪ ಗ್ರಾಮಗಳ ಕೆರೆ ತುಂಬುವ ೨೧೨ ಕೋಟಿ ಕಾಮಗಾರಿಗೆ ಈಗಾಗಲೇ ಭಾರೀ ಪ್ರಮಾಣದ ಪೈಪ್‌ಗಳು ಸಿದ್ರಾಂಪೂರು ಗ್ರಾಮದಲ್ಲಿ ಸಂಗ್ರಹಿಸಲಾಗಿದ್ದು, ಇಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ನಗರ ವಿಧಾನಸಭಾ ಕ್ಷೇತ್ರದ ೧೪ ಗ್ರಾಮಗಳ ಅತ್ಯಂತ ಪ್ರಮುಖ ಈ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳನ್ನೇ ಆಹ್ವಾನಿಸಲು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಸಿದ್ಧತೆ ನಡೆಸಿದ್ದಾರೆ. ಈಗಷ್ಟೇ ಹಾನಗಲ್, ಸಿಂದಗಿ ಚುನಾವಣೆ ಪೂರ್ಣಗೊಂಡಿದ್ದರಿಂದ ಮುಖ್ಯಮಂತ್ರಿಯೊಂದಿಗೆ ಯೋಜನೆ ಉದ್ಘಾಟನೆ ಕುರಿತು ಚರ್ಚಿಸಿ, ಮುಹೂರ್ತ ನಿಗದಿ ಪಡಿಸಲು ತೀರ್ಮಾನಿಸಿದ್ದಾರೆ. ಈಗಾಗಲೇ ೧೪ ಗ್ರಾಮಗಳ ಕೆರೆ ತುಂಬುವ ಯೋಜನೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.
ಈ ಕಾಮಗಾರಿಗೆ ಅಗತ್ಯವಾದ ಪೈಪ್ ಮತ್ತಿತರ ಸಾಮಾಗ್ರಿಗಳನ್ನು ೧೪ ಗ್ರಾಮಗಳ ವ್ಯಾಪ್ತಿಯಲ್ಲಿ ಸಂಗ್ರಹಿಸಲಾಗುತ್ತಿದೆ. ಮೊದಲ ಹಂತದಲ್ಲಿ ಭಾರೀ ಸಂಖ್ಯೆಯ ಪೈಪ್ ಸಂಗ್ರಹಿಸುವ ಮೂಲಕ ನೀರಾವರಿ ಸೌಲಭ್ಯದಿಂದ ವಂಚಿತಗೊಂಡ ೧೪ ಗ್ರಾಮಗಳ ಕೆರೆ ತುಂಬುವ ಮೂಲಕ ನೀರಾವರಿ ಸೇರಿದಂತೆ ಅಂತರ್ಜಲ ಮಟ್ಟವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗಿದೆ. ಶಾಸಕ ಡಾ.ಶಿವರಾಜ ಪಾಟೀಲ್ ಅವರು ಈ ಯೋಜನೆಗೆ ಸಂಬಂಧಪಟ್ಟಂತೆ ಅನೇಕ ಕಾರ್ಯಕ್ರಮಗಳಲ್ಲಿ ಮಾಹಿತಿ ನೀಡಿದ್ದಾರೆ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ತ್ಯಾಗ ಮಾಡಿ, ೧೪ ಗ್ರಾಮಗಳ ಜನರಿಗೆ ನೀರಿನ ಸಮಸ್ಯೆ ನಿವಾರಣೆಯ ಶಾಶ್ವತ ಯೋಜನೆ ಅನುಷ್ಠಾನಕ್ಕೆ ೨೧೨ ಕೋಟಿ ಅನುದಾನ ಮಂಜೂರಿ ಮಾಡಲು ಈ ಹಿಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರು.
ಶಾಸಕರ ಮನವಿ ಮೇರೆಗೆ ಯಡಿಯೂರಪ್ಪ ಅವರು ಒಂದೇ ದಿನದಲ್ಲಿ ಕ್ಯಾಬಿನೆಟ್ ಸಭೆಯಲ್ಲಿ ೨೧೨ ಕೋಟಿ ಯೋಜನೆಗೆ ಮಂಜೂರಿ ಮಾಡಿದ್ದರು. ೧೪ ಹಳ್ಳಿಗಳ ಕೆರೆ ತುಂಬುವ ಯೋಜನೆಗೆ ೨೧೨ ಕೋಟಿ ಬಿಡುಗಡೆಗೆ ಅಧಿಕಾರಿಗಳು ನಿರಾಸಕ್ತಿ ವಹಿಸಿದ್ದರು. ಶಾಸಕ ಡಾ.ಶಿವರಾಜ ಪಾಟೀಲ್ ಅವರು ಪಟ್ಟು ಬಿಡದೇ, ಮುಖ್ಯಮಂತ್ರಿಗಳೊಂದಿಗೆ ನೇರವಾಗಿ ಚರ್ಚಿಸಿ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನವೂ ನಿರಾಕರಿಸಿ, ಈ ಹಣ ಬಿಡುಗಡೆಗೆ ಮನವಿ ಮಾಡಿದ್ದರು. ಕೊನೆಗೂ ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ೨೧೨ ಕೋಟಿ ರೂ. ಯೋಜನೆಗೆ ಮಂಜೂರಾತಿ ನೀಡುವ ಮೂಲಕ ನಗರ ವಿಧಾನಸಭಾ ಕ್ಷೇತ್ರದ ೧೪ ಗ್ರಾಮಗಳ ಕೆರೆ ತುಂಬುವ ಯೋಜನೆಯ ಕನಸು ನನಸಾಗುವಂತೆ ಮಾಡಿದೆ.
ಸಿದ್ರಾಂಪೂರು ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಡಾ.ಶಿವರಾಜ ಪಾಟೀಲ್ ಅವರನ್ನು ಸಂಪರ್ಕಿಸಿದಾಗ, ಈಗಾಗಲೇ ಪೈಪ್‌ಗಳು ಬಂದಿವೆ. ಇನ್ನಿತರ ಸಾಮಾಗ್ರಿಗಗಳು ಸಂಗ್ರಹಿಸಲಾಗುತ್ತದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರ್ಧರಿಸಿದ್ದು, ಅವರೊಂದಿಗೆ ಚರ್ಚಿಸಿ, ಸಮಯ ನಿಗದಿ ಪಡಿಸಿ, ಕೆರೆಗೆ ನೀರು ತುಂಬುವ ಯೋಜನೆ ಉದ್ಘಾಟನೆ ಮುಹೂರ್ತ ನಿಗದಿ ಪಡಿಸಲಾಗುತ್ತದೆಂದು ಹೇಳಿದರು.