ಸಿದ್ಧೇಶ್ವರ ಶ್ರೀಗಳ ದಿವ್ಯವಾಣಿ: ದೇವರಿರುವುದು ನಮ್ಮ ಹೃದಯಮಂದಿರದಲ್ಲಿ.ಭಗವಂತ ನಿತ್ಯ ನಿರಾಕಾರ

(ಸಂಜೆವಾಣಿ ವಾರ್ತೆ)
ಭಾಲ್ಕಿ:ನ.13: ಭಕ್ತಿಹೃದಯ ಇದು ಭಗವತ್ ಚಿಂತನ. ದೇವರನ್ನು ಕುರಿತು ದಾರ್ಶನಿಕರು ಅನುಭಾವಿಗಳು ಅನೇಕ ಮಾತುಗಳನ್ನು ಹೇಳಿದ್ದಾರೆ. ಆ ಮಾತುಗಳಲ್ಲಿ ಭಗವಂತನ ಭಾವಚಿತ್ರ ಮೂಡಿ ನಿಂತಿದೆ. ದೇವನನ್ನು ಬಣ್ಣಗಳಲ್ಲಿ ಚಿತ್ರಿಸಲಿಕ್ಕೆ ಆಗುವುದಿಲ್ಲ. ಕಲ್ಲಿನಲ್ಲಿ ಕೆತ್ತಲಿಕ್ಕೆ ಆಗುವುದಿಲ್ಲ. ಶಬ್ದಗಳ ಮಧ್ಯದಲ್ಲಿಯೇ ಆಗಬೇಕು. ಒಬ್ಬ ಚಿತ್ರಕಾರ ಎಷ್ಟೇ ಸಮರ್ಥನಾಗಿರಬಹುದು ಆದರೆ ಎಲ್ಲವನ್ನು ಬಣ್ಣಗಳಲ್ಲಿ ಮೂಡಿಸಲು ಸಾಧ್ಯವಿಲ್ಲ. ಮುಖವನ್ನು ಚಿತ್ರಿಸಬಹುದು ಕಣ್ಣಿನ ಭಾವನೆಯನ್ನು ವ್ಯಕ್ತ ಗೊಳಿಸಬಹುದು, ಮೈಮಾಟವನ್ನು ಚಿತ್ರಿಸಬಹುದು, ಮನವನ್ನು ಮನದಲ್ಲಿರುವ ಭಾವನೆಗಳನ್ನು ವಿಚಾರಗಳನ್ನು ಬಣ್ಣಗಳಲ್ಲಿ ಚಿತ್ರಿಸಲು ಆಗುವುದಿಲ್ಲ. ಏಕೆಂದರೆ ಅದು ಆಕಾರರಹಿತ ವರ್ಣರಹಿತ.ಭಗವಂತ ನಿತ್ಯ ನಿರಾಕಾರ. ಮನಸ್ಸಿಗೂ ನಿಲುಕದ ತತ್ವ ಅವನನ್ನು ಬಣ್ಣಗಳಲ್ಲಿ ಚಿತ್ರಿಸುವುದಕ್ಕೆ ಸಾಧ್ಯವಿಲ್ಲ, ಕಲ್ಲುಗಳಲ್ಲಿ ಕೆತ್ತುವುದು ಸಾಧ್ಯವಿಲ್ಲ. ಶಬ್ದ ಮಾಧ್ಯಮ ದೇವನನ್ನು ಸಾಕ್ಷಾತ್ಕಾರ ಗೊಳಿಸುವ ಏಕೈಕ ಮಾರ್ಗ. ಹಿಂದೆ ಋಷಿಮುನಿಗಳು ಶರಣರು ಈ ಮಾರ್ಗವನ್ನು ಅನುಸರಿಸಿ ನಿಶಬ್ದ ವೆನಿಸಿದ ಪರಮಾತ್ಮನನ್ನು ಶಬ್ದಗಳಲ್ಲಿ ಜೋಡಿಸಿದರು. “ಪ್ರಾಣೋ ವೈ ಪರಮಂ ಬ್ರಹ್ಮ”
ವಸ್ತುವು ನಿಸ್ಸೀಮ ಅಮೃತ. ಎಲ್ಲ ಎಲ್ಲವ ತುಂಬಿ, ಮೀರಿ ನೆಲೆಸಿದ ಪರವಸ್ತು. ಅದೇ ಪ್ರಾಣ.
ಪ್ರಾಣ ಒಂದು ಆಚಂತ್ಯ ಶಕ್ತಿ. ಇದು ಅಣುವಿನಲ್ಲಿ ಇದೆ ಆಕಾಶದಲ್ಲಿದೆ. ಹೇಗೆ ನಮ್ಮ ದೇಹದಲ್ಲಿ ಮನಸ್ಸು ತುಂಬಿದೆಯೋ ಹಾಗೆ ಮನಸ್ಸಿನಲ್ಲೆಲ್ಲ ಪ್ರಾಣ ತುಂಬಿದೆ.
ವಿಶ್ವದಾದ್ಯಂತ ಒಳಗೂ-ಹೊರಗೂ ವ್ಯಾಪಿಸಿದೆ. ಪ್ರಾಣ ಎನಿಸುವ ಶಕ್ತಿಯ ವಿವಿಧ ರೂಪಗಳು ವಸ್ತುಗಳು.
ಅದು ವಿರಾಟ ಶಕ್ತಿ. ವಿಶ್ವ ಪ್ರಾಣ! ಅದಿಲ್ಲದಿದ್ದರೆ ಜೀವನವೇ ಇಲ್ಲ.
ಇ ಭೂಮಿ ನೀರು ಎಲ್ಲವೂ ಈ ಪ್ರಾಣದಿಂದ ಹೊರಬಂತು. ಈ ಮೂಲ ಪ್ರಾಣ ಅತ್ಯಂತ ಸೂಕ್ಷ್ಮ. ಎಲ್ಲದಕ್ಕೂ ಮೀರಿದ ಮಹಾ ಬಿಂದು ಮಹಾಲಿಂಗ. ಜಗತ್ತು ತೋರಿಬರುವ ಮುಂಚಿನ ಸ್ಥಿತಿ.
ಉಪನಿಷತ್ತಿನಲ್ಲಿ
“ವಾಯುರನಿಲಮಮೃತಮಥೇದಂ ಭಸ್ಮಾತಂ ಶರೀರಂ” ಎಂಬ ಸಾಲಿದೆ. ಸಾವು ಉಂಟಾದರೆ ದೇಹ ಅಗ್ನಿ ಪಾಲು, ಒಳಗಿರುವ ವೃಷ್ಟಿಪ್ರಾಣ (ವಾಯು) ವಿಶ್ವಪ್ರಾಣ (ಅನಿಲ)ದಲ್ಲಿ ಒಂದಾಗುವವು. ವಿಶ್ವ ಪ್ರಾಣವು ಅಮೃತ ಅವಿನಾಶಿ. ವಿಶ್ವ ಪ್ರಾಣದ ಮೂಲರೂಪ ಅಸ್ತಿತ್ವವೇ ದೇವ ಮೂಲಪ್ರಾಣ.
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
ಸೀಮೆ ಇಲ್ಲದ ಲಿಂಗ. ಕೈಯೊಳಗೆ ಇರುವುದು ಅದರ ಚುಳುಕು ಮಾತ್ರ. ಅದು ನಿಲಯ ಅನಿಕೇತನತ್ತ ನಡೆಸುವ ಸಾಧನ.
ಈ ಚುಳುಕು ಕಣ್ಣಲ್ಲಿ ನೋಡುತ್ತಿರಬೇಕು. ಭಾವದಲ್ಲಿ ಮಾತ್ರ ನಿಸ್ಸೀಮ ಲಿಂಗವ ಕಾಣಬೇಕು. ಇಷ್ಟಲಿಂಗವ ಹಿಡಿದ ಮಹಾಲಿಂಗವನ್ನು ಅರಿಯಬೇಕು. ಅದು ಶರಣರ ಆದೇಶ.
ಒಂದು ಸಲ ಒಬ್ಬ ರಾಜ ಭವ್ಯವಾದ ಮಂದಿರವನ್ನು ಕಟ್ಟಿಸಿದ ಅನೇಕ ವರ್ಷಗಳ ಕಾಲ ಹಲವಾರು ಜನ ಶಿಲ್ಪಿಗಳು ದುಡಿದರು. ಮಂದಿರ ಕಂಡು ರಾಜನಿಗೆ ಸಂತೋಷವಾಯಿತು. ಶುಭ ಮುಹೂರ್ತವನ್ನು ಅರಿತು ದೇವಮೂರ್ತಿಯನ್ನು ಸ್ಥಾಪಿಸಿದ ವಿಧಿವತ್ತಾಗಿ ಲಕ್ಷಾಂತರ ಜನ ನೋಡಿ ದರ್ಶನ ಪಡೆದರು. ನೂರಾರು ಜನ ಪಂಡಿತರು ಮನಸ್ತುಂಬಿ ಬಣ್ಣಿಸಿದರು. ರಾಜನಿಗೆ ಹೆಮ್ಮೆ ಆನಂದ. ಭಗವಂತನಿಗೆ ಒಂದು ಮನೆ ಕಟ್ಟಿಸಿದೆ ಮಹಾಮನೆ ಕಟ್ಟಿಸಿದೆ ಎಂಬ ಉಮ್ಮೇದ.
ಹೀಗಿರಲು ಆತನಿಗೆ ಕನಸೊಂದು ಬಿತ್ತು. ಆವಾಗ ಭಗವಂತನ ಕಂಡು ರಾಜನು ನಮಸ್ಕರಿಸಿ ಹೇಳಿದ. ಭಗವಂತನೇ ನಿನಗಾಗಿ ನಾನು ಒಂದು ಮಹಲನ್ನು ಕಟ್ಟಿಸಿದೆ. ಚಾಚು ತಪ್ಪಿಲ್ಲದೆ ಏನನ್ನು ಬಿಡದೆ ವಿಧಿವತ್ತಾಗಿ ನಿನ್ನನ್ನು ಆಹ್ವಾನಿಸಿದೆ, ನಿನಗೆ ಈ ಮಹಾಮಹಲು ದೇಗುಲ ಹಿಡಿಸಿತೇ, ಇಷ್ಟವಾಯಿತೇ ಎಂದು ಕೇಳಿದ.
ಆಗ ಭಗವಂತನು ರಾಜನೇ ನೀನು ರಚಿಸಿದ ಆ ದೇಗುಲ ನಾನು ನೋಡಲೇ ಇಲ್ಲ. ಒಬ್ಬ ಭಕ್ತ ನನಗಾಗಿ ಮೇರೆ ಇಲ್ಲದಷ್ಟು ವಿಶಾಲವಾದ ಮಂದಿರ ಕಟ್ಟಿಸಿದ. ನನಗೆ ಅಲ್ಲಿಂದ ಹೊರಬರಲಾಗಲಿಲ್ಲ!.
ಅವಾಗ ರಾಜ ಕುತೂಹಲದಿಂದ ಕೇಳಿದ ದೇವರೇ ಅಂತಹ ಮಂದಿರ ನಾನು ಎಲ್ಲಿ ನೋಡಿಲ್ಲ ಎಲ್ಲಿರುವುದೋ ಅದು ಎಂದು ಕೇಳಿದ.
ಆಗ ದೇವನು “ರಾಜನೇ, ಅದು ಭಕ್ತನ ಹೃದಯದಲ್ಲಿ. ನಿರ್ಮಲ ಪ್ರೇಮದ ಗಾರೆಯಿಂದ ಕಟ್ಟಿದ್ದಾನೆ. ಗೋಡೆಗಳೇ ಇಲ್ಲದ ಮಹಾದೇವಾಲಯ ಅದು. ಅಲ್ಲಿ ಅಹಂ ಮಮಗಳಿರಲಿಲ್ಲ. ಅಳಿಯಾಸೆ ಸಂಕಲ್ಪಗಳಿರಲಿಲ್ಲ.! ನಾನು ಅನೇಕ ಶತಮಾನಗಳಿಂದ ಹುಡುಕಾಡುತ್ತಿದ್ದೆ. ಅಂತಹ ಒಂದು ಮಂದಿರ ಯಾರಾದರೂ ಕಟ್ಟಿದ್ದಾರೆಂದು!. ನಿನ್ನೆಯೇ ನೋಡಿದೆ, ಆ ಬಡ ಗುಡಿಸಲಿನಲ್ಲಿರುವ ಆ ಮಹಾಭಕ್ತ. ನಾನು ಅಲ್ಲಿ ಪ್ರವೇಶಿಸಿದೆ, ನಿನ್ನ ಮಂದಿರಕ್ಕೆ ಬರಲಾಗಲಿಲ್ಲ.
ಒಂದು ಗುಡಿಯನ್ನು ಕಟ್ಟುತ್ತೇವೆ. ಗುಡಿಯೊಳಗೆ ಪ್ರತಿಮೆಯನ್ನು ಸ್ಥಾಪಿಸುತ್ತೇವೆ. ಆದರೆ ಗುಡಿಯೊಳಗೆ ಭಗವಂತನನ್ನು ಹಿಡಿದಿರಲು ಹೇಗೆ ಸಾಧ್ಯ?. ಗಡಿಗೆಯಲ್ಲಿ ಸಾಗರವನ್ನೇ ತುಂಬುವುದು ಹೇಗೆ ಸಾಧ್ಯ?. ಒಂದು ವಿಶಾಲ ಮಹಲನ್ನು ಕಟ್ಟಿ ಅದರಲ್ಲಿ ಸೂರ್ಯನನ್ನು ಬಂಧಿಸುವುದು ಹೇಗೆ ಸಾಧ್ಯ?. ಅದರಂತೆ ಈ ಪುಟ್ಟ ಮತಿಯೊಳಗೆ ಭಗವಂತನನ್ನು ಸೆರೆದಿಡುವುದು ಹೇಗೆ ಸಾಧ್ಯ!. ಭಗವಂತ ಅನಿಕೇತ!. ನಾವು ಗುಡಿ ಕಟ್ಟಬಹುದು, ಭವ್ಯ ಮಂದಿರ ಸ್ಥಾಪಿಸಬಹುದು, ಸುಂದರವಾದ ಮೂರ್ತಿಯನ್ನು ಪ್ರತಿಷ್ಠಾಪಿಸಬಹುದು. ಆದರೆ ಆ ಮೂರ್ತಿಯ ನಿಜವಾದ ಭಗವಂತ ಎಂದು ಭಾವಿಸಿರುವುದು ಎಷ್ಟು ಸಮಂಜಸ. ಮಂದಿರ ಮಸೀದಿಗಳಲ್ಲಿ ಚರ್ಚಿನಲ್ಲಿ ದೇವರಿಲ್ಲ. ದೇವರಿರುವುದು ನಮ್ಮ ಹೃದಯಮಂದಿರದಲ್ಲಿ. ದೇವರು ಅನಿಕೇತ. ಎಲ್ಲಾದರೂ ಅವನಿಗೆ ನಿಕೇತನವಲ್ಲದ ನಿಕೇತನ ಕಲ್ಪಿಸುವುದಾದರೆ ಅದು ಭಕ್ತನ ಹೃದಯದಲ್ಲಿ! ಸಮಸ್ತ ಜಗತ್ತಿಗೆ ಆಶ್ರಯವಾದ ದೇವರಿಗೊಂದು ಆಶ್ರಯ
ಭಕ್ತಿ- ದೇಗುಲ.
ಸಂಗ್ರಹ : ಸಿದ್ದಲಿಂಗ ಎಸ್. ಸ್ವಾಮಿ ಉಚ್ಚ ತಾ. ಭಾಲ್ಕಿ ಜಿ. ಬೀದರ