ಸಿದ್ಧೇಶ್ವರ ಶ್ರೀಗಳ ದಿವ್ಯವಾಣಿ: ಈ ಸುಂದರವಾದ ಜಗತ್ತಿನಲ್ಲಿ ನಾವು ಬಾಳುತ್ತಿದ್ದೇವೆ. ಸತ್ಯಂ ಶಿವಂ ಸುಂದರಂ

(ಸಂಜೆವಾಣಿ ವಾರ್ತೆ)
ಭಾಲ್ಕಿ:ನ.10:ದೇವನು ಸುಂದರ, ಸತ್ಯ, ಶಾಂತ. ಇದು ದೇವನ ರೂಪ.
ಇರುವಿಕೆ, ಪ್ರಶಾಂತಿ, ಸುಂದರ ಸೌಂದರ್ಯ ಇದು ದೇವನ ಮೂರು ಲಕ್ಷಣ. ಎಲ್ಲಿ ಎಲ್ಲಿ ಸೌಂದರ್ಯವಿದೆಯೋ ಅಲ್ಲಿ ದೇವನ ರೂಪವಿದೆ ಎಂದು ಭಾವಿಸಬೇಕು. ಒಂದು ಹೂವು ಸುಂದರವಾಗಿದ್ದರೆ ಅಲ್ಲಿ ದೇವರು ಇರುವನು. ದೇವರು ಹೂವಿನ ಸೌಂದರ್ಯದ ರೂಪದಲ್ಲಿ ಇರುವನು. ಇದು ಭಾರತೀಯ ಶ್ರೇಷ್ಠ ಋಷಿಗಳು ದರ್ಶನ ಮಾಡಿದ ಪ್ರಕಾರ ದೇವನನ್ನು ಎಲ್ಲೆಲ್ಲಿ ಕಾಣುವುದೆಂದರೆಪುಷ್ಪಗಳಲ್ಲಿ ದೇವರನ್ನು ಕಾಣುವುದು,ಬೆಳಕಿನ ಸೌಮ್ಯ ಶಾಂತ ಪ್ರಕಾಶದಲ್ಲಿ ದೇವರನ್ನು ಕಾಣುವುದು,
ವಿವಿಧ ಬಣ್ಣಗಳಲ್ಲಿ ದೇವನನ್ನು ಕಾಣುವುದು.
ಭಾವ ಸೌಂದರ್ಯ, ಜ್ಞಾನ ಸೌಂದರ್ಯ, ವಸ್ತು ಸೌಂದರ್ಯ, ಗುಣ ಸೌಂದರ್ಯ ಇವೆಲ್ಲವೂ ಸುಂದರ ಸಂಗತಿಗಳು. ಎಲ್ಲಿ ಸೌಂದರ್ಯವಿರುತ್ತದೆಯೋ ಅಲ್ಲಿ ಸಂತೋಷವಿರುತ್ತದೆ, ಸಮಾಧಾನವಿರುತ್ತದೆ. ಎಲ್ಲಿ ಸಮಾಧಾನವಿರುತ್ತದೆ, ಎಲ್ಲಿ ಸುಂದರ ಇರುತ್ತದೆಯೋ ಅಲ್ಲಿ ದೇವನಿರುವನು.
ಮನುಷ್ಯನೇ ಎಲ್ಲಿ ನಿನಗೆ ಮನಸ್ಸಿಗೆ ಸಮಾಧಾನವಾಗಿರುತ್ತದೆಯೋ, ಕಣ್ಣುಗಳು ಅರಳುತ್ತವೆಯೋ , ಮನಸ್ಸು ವಿಕಸನಗೊಳ್ಳುತ್ತದೆಯೋ ಅಲ್ಲಲ್ಲಿ ದೇವನ ಅಸ್ತಿತ್ವವಿದೆ ಅದನ್ನು ಗುರುತಿಸು, ಅನುಭವಿಸು.
ಜಗತ್ತೆಲ್ಲಾ ಸುಂದರ, ಈ ಪೃಥ್ವಿ ಎಷ್ಟು ಸುಂದರ ಬೆಟ್ಟಗುಡ್ಡಗಳು, ಪರಿಸರ, ಗಾಳಿ, ಬೆಳಕು, ನೀರು ಇವೆಲ್ಲವುಗಳಲ್ಲಿ ಭಗವಂತನ ಅಸ್ತಿತ್ವವಿರುತ್ತದೆ.
ಸತ್ಯಂ ಶಿವಂ ಸುಂದರಂ. ಎಲ್ಲಿ ಇವೆಲ್ಲವೂ ಇದೆಯೋ ಅಲ್ಲಿ ಸುಂದರವಾಗಿದೆ ಅಲ್ಲಿ ದೇವನಿರುವನು. ಏಕೆಂದರೆ ದೇವರು ಕುರೂಪಿಯಲ್ಲ. ಯಾವುದನ್ನು ನೋಡಿದರೆ ಕಣ್ಣುಗಳು ಅರಳುತ್ತವೆ, ಯಾವುದನ್ನು ನೆನೆಸಿಕೊಂಡರೆ ಭಾವ ಮಧುರವಾಗುತ್ತದೆ, ಯಾವುದನ್ನು ತಿಳಿದುಕೊಂಡರೆ ಮನಸ್ಸು ಪ್ರಶಾಂತಗೊಳ್ಳುತ್ತದೆ. ಅಂತಹ ವಸ್ತುವೇ ಸೌಂದರ್ಯ. ಹೇಗೆ ಹೊರಗಿನ ಬಾಹ್ಯ ಸೌಂದರ್ಯವಿದೆಯೋ ಹಾಗೆ ಒಳಗೆ ಭಾವ ಸೌಂದರ್ಯ. ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವ ಭಾವ ಎಷ್ಟು ಸುಂದರ. ಭಾರತೀಯರು ಸಾವಿರಾರು ವರ್ಷಗಳಿಂದ ಪ್ರಾರ್ಥನೆ ಮಾಡಿ ಎಲ್ಲರಿಗೂ ಸರ್ವ ಜನಕ್ಕೂ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದಾರೆ.
ಹೇಗೆ ವ್ಯಕ್ತಿಯ ಹೊರಗಿನ ಸೌಂದರ್ಯವಿದೆಯೋ ಹಾಗೆ ಒಳಗಿನ ಆಂತರಿಕ ಸೌಂದರ್ಯ. ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವ ಭಾವ ಎಷ್ಟು ಸುಂದರ. ಸೌಂದರ್ಯ ಎಂಬುದು ಬರಿ ಚರ್ಮದಲ್ಲಿ ಅಲ್ಲ, ಬಣ್ಣದಲ್ಲಿ ಇಲ್ಲ ಅದು ಭಾವದಲ್ಲಿ ಇದೆ, ವಿಚಾರದಲ್ಲಿ ಇದೆ. ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವ ಭಾವ.
“ಸರ್ವೇ ಜನಃ ಸುಖಿನೋಭವತು”

“ಓಂ ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರ್-ಆಮಾಯಾಃ |
ಸರ್ವೇ ಭದ್ರಾನ್ನಿ ಪಶ್ಯಂತು, ಮಾ ಕಶ್ಚಿದ್-ದುಃಖ-ಭಾಗ್-ಭವೇತ್ |
ಓಂ ಶಾಂತಿಃ ಶಾಂತಿಃ ಶಾಂತಿಃ ||”
ಸರ್ವೇಜನಃ ಸುಖಿನಾಭವತು”
ನಮ್ಮವರು ನಿಮ್ಮವರು ಎನ್ನದೆ ಎಲ್ಲರೂ, ಎಲ್ಲಾ ವರ್ಗದ ಜನರು ಸುಖದಿಂದ ಇರಲಿ ಎಂಬ ಭಾವ. ಬೆಳಿಗ್ಗೆ ಎದ್ದ ಕೂಡಲೇ ದೇವರಿಗೆ ಕೈಮುಗಿದು ಎಲ್ಲ ಜನರಿಗೂ ಒಳ್ಳೆಯ ಆರೋಗ್ಯ ಭಾಗ್ಯವನ್ನು ಇತ್ತು ಸುಖದಿಂದ ಇರುವ ಹಾಗೆ ಮಾಡು ದೇವನೇ ಎಂದು ಬೇಡಿಕೊಳ್ಳಬೇಕು. ಇದೇ ಸೌಂದರ್ಯ. ಇದೆ ಭಾವ ಸೌಂದರ್ಯ.
ಸರ್ವೇ ಸಂತು ನಿರ್-ಆಮಾಯಾಃ
ಜನರು ಆರೋಗ್ಯವಂತರಾಗಿ ಸಂತೋಷದಿಂದ ಇರಬೇಕು. ಮನಸ್ಸು ಆಮಯ ( ಕಲ್ಮಶ) ಇರಬಾರದು. ಸ್ವಚ್ಛ ಸುಂದರವಾಗಿರಬೇಕು. ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವ ಭಾವ. ಮನುಷ್ಯನಾಗಲಿ, ಪ್ರಾಣಿಗಳಾಗಲಿ ಎಲ್ಲರೂ, ಎಲ್ಲವೂ ಸುಖದಿಂದ ಸಂತೋಷವಾಗಿ ಇರಲಿ ಎಂಬ ಸುಂದರ ಭಾವ. ಇಂತಹ ಸುಂದರವಾದ ಭಾವದಲ್ಲಿ ಭಗವಂತನ ಅಸ್ತಿತ್ವ. ಅದುವೇ ಭಾವ ಸೌಂದರ್ಯ.
ಯಾವ ವಿಚಾರಗಳಲ್ಲಿ ಸತ್ಯ ಮೂಡುತ್ತದೆಯೋ ಆ ವಿಚಾರಗಳು ಭಾವ ಸೌಂದರ್ಯ ಅಲ್ಲಿ ದೇವನ ಅಸ್ತಿತ್ವವಿದೆ.
ಕಾರ್ಯ, ಭಾವ, ಜ್ಞಾನ ಈ ಮೂರು ಸುಂದರ ಭಾವಗಳು.
ಕಾರ್ಯ ಹೊರಗೆ,
ಭಾವ- ಜ್ಞಾನ ಒಳಗೆ.
ಯಾವಾಗ ಕೈಗಳಿಂದ ಒಳ್ಳೆಯ ಕಾರ್ಯ ನಡೆಯುತ್ತದೆಯೋ ಅದು ದೇಹ ಸುಂದರ, ಒಳ್ಳೆಯ ಮಾತುಗಳನ್ನು ಆಡಿದರೆ ದೇಹ ಸುಂದರ, ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವುದೇ ಭಾವ ಸುಂದರ, ಸತ್ಯವನ್ನು ಗ್ರಹಿಸಿದರೆ ಅದು ಜ್ಞಾನಸುಂದರ. ಆದ್ದರಿಂದ ಸತ್ಯಂ ಶಿವಂ ಸುಂದರಂ. ಅಲ್ಲಿ ಭಗವಂತನನ್ನು ಕಾಣು.
ಬಸವಣ್ಣ ಹೇಳಿರುವರು ಸ್ವಚ್ಛವಾಗಿರು, ಸತ್ಯವಾಗಿರು ಇದುವೇ ಸೌಂದರ್ಯ. ಮಾತು, ಕೃತಿ, ಭಾವ, ಜ್ಞಾನ ಇವುಗಳ ಸ್ವಚ್ಛತೆಯೇ ಸುಂದರವೇ ದೇವರು.
ಇದುವೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ.
ಸತ್ಯ ಶಿವಂ ಸುಂದರಂ ಈ ಮೂರು ದೇವನ ಅಭಿವ್ಯಕ್ತ ರೂಪಗಳು. ದೇವನನ್ನು ಅನುಭವಿಸಬೇಕಾದರೆ ಈ ರೀತಿ ಅನುಭವಿಸು.ಯಾವುದೇ ರೂಪದಲ್ಲಿ ದೇವರಿಲ್ಲ. ಈ ಜಗತ್ತಿನಲ್ಲಿ ಏನೇನಿದೆಯೋ ಅವುಗಳೆಲ್ಲವೂ ದೇವನ ರೂಪವಿದೆ.ಸಂಗ್ರಹ : ಸಿದ್ದಲಿಂಗ ಎಸ್. ಸ್ವಾಮಿ ಉಚ್ಚ ತಾ. ಭಾಲ್ಕಿ ಜಿ ಬೀದರ