ಸಿದ್ಧು ರಾಜಕೀಯ ಜೀವನ ಪರಿಚಯಿಸಲು ಅಮೃತ ಮಹೋತ್ಸವ:ಕೆಎನ್‌ಆರ್

ಮಧುಗಿರಿ, ಜು. ೨೬- ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರು ನಡೆದು ಬಂದ ದಾರಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ದಾವಣಗೆರೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಹೇಳಿದರು.
ಪಟ್ಟಣದ ಎಂಎನ್‌ಕೆ ಸಮುದಾಯ ಭವನದಲ್ಲಿ ಸಿದ್ದರಾಮಯ್ಯನವರ ೭೫ನೇ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆಯಲ್ಲಿ ನಡೆಯಲಿರುವ ಅಮೃತ ಮಹೋತ್ಸವ ಕಾರ್ಯಕ್ರಮ ಮತ್ತು ಆಗಸ್ಟ್ ೧೫ ರಂದು ಬೆಂಗಳೂರಿನಲ್ಲಿ ನಡೆಯುವ ಸ್ವಾತಂತ್ರ್ಯದ ನಡಿಗೆ ಅಂಗವಾಗಿ ತಾಲ್ಲೂಕಿನಲ್ಲಿ ಗ್ರಾ.ಪಂ. ಕೇಂದ್ರದಿಂದ ಹೋಬಳಿ ಕೇಂದ್ರಕ್ಕೆ ನಡೆಯಲಿರುವ ೭೫ ಕಿಲೋ ಮೀಟರ್ ಪಾದಯಾತ್ರೆಯ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ೬ ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್‌ಗಾಂಧಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅಮೃತ ಮಹೋತ್ಸವ ಕಾರ್ಯಕ್ರಮದ ಆಯೋಜನೆಗೆ ನನಗೆ ಅಧ್ಯಕ್ಷ ಸ್ಥಾನ ನೀಡಿರುವುದು ಜಿಲ್ಲೆಗೆ ಮತ್ತು ತಾಲ್ಲೂಕಿಗೆ ತಂದ ಗೌರವ ಎಂದರು.
ಕಳೆದ ಕೆಲವು ದಿನಗಳಿಂದ ನನ್ನ ವಿರುದ್ದ ನಿರಂತರವಾಗಿ ರಾಜಕೀಯ ಸಂಘರ್ಷ ನಡೆಯುತ್ತಿದ್ದು, ವಿನಾ ಕಾರಣ ನನ್ನ ವಿರುದ್ದ ಅಪಪ್ರಚಾರ ಮಾಡಲಾಗುತ್ತಿದೆ. ನನ್ನನ್ನು ನಂಬಿರುವ ಕಾರ್ಯಕರ್ತರಿಗೆ, ಧ್ವನಿ ಇಲ್ಲದವರಿಗೆ, ತಳಸಮುದಾಯಕ್ಕೆ ರಾಜಕೀಯ ಅಧಿಕಾರ ನೀಡಲು ನಿರಂತರವಾಗಿ ಶ್ರಮಿಸುತ್ತೇನೆ. ೨೦೧೩ ರಿಂದ ೧೮ ರವರೆಗೆ ತಾಲ್ಲೂಕಿನಲ್ಲಿ ೧೬ ಸಾವಿರ ಮನೆಗಳನ್ನು ನಿರ್ಮಿಸಿದ್ದು, ಪ್ರಸ್ತುತ ೬೦ ಮನೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ ಎಂದರು.
ತಾಲ್ಲೂಕಿನಲ್ಲಿ ಮತದಾರರ ನೋಂದಣಿ ಮಾಡಿಸುವ ಅಭಿಯಾನ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ. ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಬಿ.ನಾಗೇಶ್‌ಬಾಬು, ಹನುಮಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಪುರಸಭೆ ಮಾಜಿ ಅಧ್ಯಕ್ಷರುಗಳಾದ ಎಂ ಕೆ ನಂಜುಂಡಯ್ಯ, ಎಂ ಗಂಗಣ್ಣ, ಕೆ.ಪ್ರಕಾಶ್, ಸದಸ್ಯ ಎಂ.ಎಸ್ ಚಂದ್ರಶೇಖರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆಂಚಪ್ಪ, ಮಾಜಿ ಅಧ್ಯಕ್ಷ ಚಿಕ್ಕರಂಗಪ್ಪ, ಮುಖಂಡರುಗಳಾದ ಪಿ.ಟಿ ಗೋವಿಂದಯ್ಯ, ಡಿ. ಹೆಚ್. ನಾಗರಾಜು, ಜಿ.ಡಿ ವೆಂಕಟೇಶ್, ಗ್ರಾ.ಪಂ. ಅಧ್ಯಕ್ಷ ಸಿದ್ದಾಪುರ ವೀರಣ್ಣ ಮತ್ತಿತರರು ಉಪಸ್ಥಿತರಿದ್ದರು.