ಸಿದ್ಧಿ ಜನಾಂಗಕ್ಕೆ ಸೂಕ್ತ ಮೀಸಲಾತಿ ದೊರಕಿಸುವ ಯತ್ನ ಆಗಬೇಕು

ಧಾರವಾಡ,ಜೂ27 : ಪ್ರಧಾನಮಂತ್ರಿ ನರೇಂದ್ರ ಮೋದಿಯವರಂತೆ ಉಳಿದ ಕ್ಯಾಬಿನೆಟ್ ಸಚಿವರು ಹಾಗೂ ಸಂಸದರು ಉತ್ತಮ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಮುಂದೆಯೂ ಅವರೇ ಪ್ರಧಾನ ಮಂತ್ರಿಗಳಾಗಿ ಮುಂದುವರೆಯಬೇಕು ಎಂಬುದು ನಮ್ಮ ಆಶಯವಿದೆ. ಅವರಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಲು ಕ್ಯಾಬಿನೆಟ್ ಸಚಿವರು ಹಾಗೂ ಸಂಸದರು ಮುಂದಾಗಬೇಕು ಎಂದು ತಿಳಿಸಿದರು.

ಸಿದ್ಧಿ ಜನಾಂಗದ ಹಾಗೂ ಬುಡಕಟ್ಟು ಜನಾಂಗದ ಮುನ್ನೆಲೆಗೆ ತರಲು ಕೆಲಸ ಮಾಡುವಂತೆ ಆಗಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೂಚನೆ ನೀಡಿದರು. ನಾನು ರಾಜ್ಯದ ಬುಡಕಟ್ಟು ಜನಾಂಗದ ಹಾಗೂ ಸಿದ್ಧಿ ಜನಾಂಗದ ಸಮಸ್ಯೆ ಕುರಿತು ವಿಧಾನ ಪರಿಷತ್ ನಲ್ಲಿ ಧ್ವನಿ ಎತ್ತುವ ಕೆಲಸ ಮಾಡುತ್ತಿದ್ದೇನೆ. ಸಿದ್ಧಿ ಜನಾಂಗಕ್ಕೆ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾಗಿದೆ. ಸಿದ್ಧಿ ಜನಾಂಗಕ್ಕೆ ಸೂಕ್ತ ಮೀಸಲಾತಿ ದೊರಕಿಸುವ ಪ್ರಯತ್ನ ಆಗಬೇಕು. ಸಿದ್ಧಿಗಳನ್ನು ಎಸ್ಟಿ ಯಲ್ಲಿ ಪರಿಗಣಿಸಲಾಗಿದ್ದರು ಅವರಿಗೆ ಸಾಮಾಜಿಕ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಸಿದ್ಧಿ ಜನಾಂಗಕ್ಕೆ ಸೂಕ್ತ ಮೀಸಲಾತಿ ಸೌಲಭ್ಯ ಕಲ್ಪಿಸಲು ವಿಶೇಷ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಬಹುಮತದ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಇದರಿಂದ ರಾಜ್ಯದಲ್ಲಿ ಯಾವುದೇ ಗೊಂದಲ ಇಲ್ಲ, ಸರ್ಕಾರಕ್ಕೆ ಉತ್ತಮ ಕೆಲಸ ಮಾಡಲು ಸಹಕಾರಿಯಾಗಿದೆ. ಈಗ ಯಾವುದೇ ಕಾರಣಗಳನ್ನು ಹೇಳದೆ ಉತ್ತಮ ನಿರ್ಧಾರ ಕೈಗೊಳ್ಳಬಹುದು. ಬುಡಕಟ್ಟು ಜನಾಂಗದ ಹಾಗೂ ಸಿದ್ಧಿ ಜನಾಂಗದ ಪರವಾಗಿ ಹೆಚ್ಚು ಗಮನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಡಬೇಕು ಎಂದರು.

ಸಿದ್ಧಿ ಜನಾಂಗದವರು ಮೂಲ ಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅವರನ್ನು ಬೇರೆಯ ರೀತಿಯಲ್ಲಿ ಕಾಣುವುದು ಹೆಚ್ಚಾಗಿದೆ. ಸಂವಿಧಾನಾತ್ಮಕವಾಗಿ ಅವರಿಗೆ ಸಿಗಬೇಕಾದ ಸ್ಥಾನಮಾನ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸತತ ಪ್ರಯತ್ನ ಮುಂದುವರೆಸುತ್ತೇವೆ ಎಂದು ಅವರು ಹೇಳಿದರು.