ಸಿದ್ಧಾರ್ಥ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್‍ಗೆ ಚಾಲನೆ

ತುಮಕೂರು, ಏ. ೩- ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಕ್ಷ-ಕಿರಣ(ಎಕ್ಸರೇ) ವಿಭಾಗದಲ್ಲಿ ನೂತನವಾಗಿ ಆರಂಭಿಸಲಾಗಿರುವ ಆತ್ಯಾಧುನಿಕ ಗುಣಮಟ್ಟದ ಅಲ್ಟ್ರಾಸೌಂಡ್ ಸ್ಕ್ಯಾನ್ ಲ್ಯಾಬ್ ಉದ್ಘಾಟನೆಯನ್ನು ಕಾಲೇಜಿನ ನಿರ್ದೇಶಕ ಹಾಗೂ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಜಿ.ಪರಮೇಶ್ವರ್ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆಯಲ್ಲಿ ಹೊಸದಾದ ಕ್ಷ-ಕಿರಣ ವಿಭಾಗವನ್ನು ಪ್ರಾರಂಭಿಸಿದ್ದು, ಆಧುನಿಕ ಗುಣಮಟ್ಟ ಮತ್ತು ತಂತ್ರಜ್ಞಾನದ ಅಲ್ಟ್ರಾಸೌಂಡ್ ಸ್ಕ್ಯಾನರ್ ಅಳವಡಿಸಲಾಗಿದೆ. ಗ್ರಾಮಾಂತರ ಪ್ರದೇಶದ ಬಡಜನರ ಆರೋಗ್ಯ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆ ಈ ಪ್ರಯತ್ನ ಮಾಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕ್ಷ-ಕಿರಣ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಗುರುಶಂಕರ್ ಮಾತನಾಡಿ, ಕ್ಷ-ಕಿರಣ ವಿಭಾಗದಲ್ಲಿ ಈಗಾಗಲೇ ಎಂಆರೈ ಸ್ಕ್ಯಾನ್, ೧.೫. ಟೇಸ್ಲಾ ಎಂ ಆರೈಸ್ಕ್ಯಾನ್, ೧೬ ಸೈಸ್ ಸಿಟಿ ಸ್ಕ್ಯಾನ್, ಮೂರು ಬಗೆಯ ಅಲ್ಟ್ರಾ ಸೌಂಡ್ ಸ್ಕ್ಯಾನ್ ಉಪಕರಣಗಳು ಹಾಗೂ ಮ್ಯಾಮೋಗ್ರಾಫಿ ಯುನಿಟ್, ಸ್ತನ ಪರೀಕ್ಷೆ ಮಾಡುವ ಯಂತ್ರ ಹಾಗೂ ೧೨ ಬಗೆಯ ಎಕ್ಸರೇ ಯಂತ್ರಗಳ ಸೌಲಭ್ಯ ಲಭ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಿಇಓ ಡಾ.ಪಿ.ಕೆ.ದೇವದಾಸ್, ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟರ್ ಡಾ.ಎಂ.ಝಡ್. ಕುರಿಯನ್, ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಪ್ರಭಾಕರ್, ವೈದ್ಯಕೀಯ ಅಧೀಕ್ಷಕ ಡಾ. ವೆಂಕಟೇಶ್ ಹಾಗೂ ವಿವಿಧ ವಿಭಾಗಗಳ ವೈದ್ಯರು ಉಪಸ್ಥಿತರಿದ್ದರು.