
ಕಲಬುರಗಿ,ಆ.23-ಚಿತ್ತಾಪುರ ತಾಲೂಕಿನ ಸುಕ್ಷೇತ್ರ ಹಲಕರ್ಟಿ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಹುಬ್ಬಳ್ಳಿಯ ಸಿದ್ಧಾರೂಢರ ಮಹಾಪುರಾಣ ಸಂದರ್ಭದಲ್ಲಿ ಸಿದ್ಧಾರೂಢರ ತೊಟ್ಟಿಲು ಕಾರ್ಯಕ್ರಮ ಅದ್ಧೂರಿಯಾಗಿ ಜರಗಿತು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ ಹಲಕರ್ಟಿಯ ಕಟ್ಟಿಮನಿ ಹಿರೇಮಠ ಅಭಿನವ ಮುನಿ ಶಿವಾಚಾರ್ಯರ ಮಹಾಸ್ವಾಮಿಗಳು ಮಾತನಾಡಿ, ಸಿದ್ದಾರೂಢರೂ ಆಧ್ಯಾತ್ಮ ವೇದಾಂತ ಲೋಕದ ಸೂರ್ಯ ಇದ್ದ ಹಾಗೆ, ಅವರು ನಮ್ಮ ಕಲ್ಯಾಣ ನಾಡಿನಲ್ಲಿ ಹುಟ್ಟಿರುವುದು ಬಹಳ ಹೆಮ್ಮೆಯ ವಿಚಾರ ಎಂದರು. ಇದೇ ಸಂದರ್ಭದಲ್ಲಿ ಪುರಾಣ ಪ್ರವಚನ ನೀಡುತ್ತಿರುವ ನಾಡಿನ ಹೆಸರಾಂತ ಪುರಾಣ ಪ್ರವಚನಕಾರರಾದ ಸುಂಟನೂರ ಸಂಸ್ಥಾನ ಹಿರೇಮಠ ಬಂಡಯ್ಯ ಶಾಸ್ತ್ರೀಗಳು ಮಾತನಾಡಿ, ಕರ್ನಾಟಕದ ಆಧ್ಯಾತ್ಮಿಕ ಕಳಸ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮದ ಶಾಂತಪ್ಪ ಹಾಗೂ ದೇವಮಲ್ಲಮ್ಮ ಶಿವದಂಪತಿಯ ಮೂರನೇ ಸುಪುತ್ರರಾಗಿ ಜನಿಸಿದ ಸಿದ್ಧಾರೂಢ ಸ್ವಾಮಿಗಳು ಭವ್ಯ ಭಾರತೀಯ ಆಧ್ಯಾತ್ಮದ ಗುರು ಮತ್ತು ತತ್ವಜ್ಞಾನಿಗಳಾಗಿ ವಿಶ್ವದಾದ್ಯಂತ ಶಾಸ್ತ್ರದ ಬೀಜ ಬಿತ್ತಿದವರು ಎಂದರು.
ಸಂಗೀತಗಾರದ ವೀರಭದ್ರಯ್ಯ ಗವಾಯಿಗಳು ಕಟ್ಟಿಸಂಗಾವಿಯವರು ಸಂಗೀತ ನೀಡಿರು. ಖ್ಯಾತ ತಬಲಾ ವಾದಕರಾದ ಬಸವರಾಜ ಚಲಗೇರಿ ತಬಲಾ ಸಾಥ್ ನೀಡಿದರು. ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಚಂದ್ರಕಾಂತ ಮೇಲಿನಮನಿ, ವಾಡಿ ಪೊಲೀಸ್ ಅಧಿಕಾರಿಗಳಾದ ತುಕಾರಾಮ ಗುಡೂರು ಹಾಗೂ ವೀರಭದ್ರ ಸ್ವಾಮಿಯ ಅನೇಕ ಭಕ್ತರು ಹಲಕರ್ಟಿ ಗ್ರಾಮಸ್ಥರು ಭಾಗವಹಿಸಿದ್ದರು.