ಸಿದ್ಧಾಂತ ಶಿಖಾಮಣಿ ಜ್ಞಾನಾಮೃತ ಕಾರ್ಯಕ್ರಮ-ಮಹಾ ಕಾರ್ತಿಕೋತ್ಸವ

ಗದಗ, ನ.9: ಮನುಷ್ಯ ತನ್ನ ಗಳಿಕೆಯ ಒಂದಿಷ್ಟು ಭಾಗವನ್ನು ದಾನ-ಧರ್ಮ ಕಾರ್ಯಕ್ಕೆ ಸದ್ವಿನಿಯೋಗ ಮಾಡಬೇಕು. ದಾನ ಮಾಡಿ ಪುಣ್ಯ ಪಡೆದುಕೊಳ್ಳುವ ಸದ್ಭಾವನೆ ಎಲ್ಲರಲ್ಲಿಯೂ ಬರಬೇಕೆಂದು ಅಡ್ನೂರ-ಗದಗ ಬೃಹನ್ಮಠದ ಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ನಗರದ ಜ.ಪಂಚಾಚಾರ್ಯ ವೇದ, ಆಗಮ ಸಂಸ್ಕøತ ಪಾಠಶಾಲೆಯ ಆವರಣದಲ್ಲಿ ಜ.ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ (ರಿ) ವಾರಣಾಸಿ, ಜ.ವಿಶ್ವಾರಾಧ್ಯ ಜ್ಞಾನಾಮೃತ ಸಮಿತಿ ಎರ್ಪಡಿಸಿದ್ದ ಶ್ರೀ ಸಿದ್ಧಾಂತ ಶಿಖಾಮಣಿ ಜ್ಞಾನಾಮೃತ-179 ಮಾಸಿಕ ಕಾರ್ಯಕ್ರಮ, ಶ್ರೀ ಕಾಶೀ ವಿಶ್ವನಾಥನ ಮಹಾ ಕಾರ್ತಿಕೋತ್ಸವ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯನ ಮನಸ್ಸಿನ ಅಂಧಕಾರವನ್ನು ಕಳೆಯಲು ಜ್ಞಾನದ ದೀವಿಗೆ ಬೇಕು. ಹಣತೆಯೊಂದು ಗುಡಿಸಲಿನ ಕತ್ತಲನ್ನು ಹೋಗಲಾಡಿಸುವದು. ದೀಪ ಬೆಳಕಿನ ಸಂಕೇತ ಕತ್ತಲನ್ನು ಮರೆ ಮಾಡಿ ಬೆಳಕನ್ನು ನೀಡುವದು ಅದರ ಗುಣಧರ್ಮ ಶ್ರೀ ಕಾಶೀ ವಿಶ್ವನಾಥನ ಮಹಾ ಕಾರ್ತಿಕೋತ್ಸವವು ಎಲ್ಲರಲ್ಲಿ ಜ್ಞಾನದ ಬೆಳಕು ನೀಡಿ ಸನ್ಮಾರ್ಗದೆಡೆಗೆ ಮುನ್ನಡೆಸಲಿ ಎಂದರು.
ಕರ್ನಾಟಕ ರಾಜ್ಯೋತ್ಸವ ವಿಷಯವಾಗಿ ಉಪನ್ಯಾಸ ನೀಡಿದ ಸಾಹಿತಿ ಮಂಜುಳಾ ವೆಂಕಟೇಶಯ್ಯ ಹಲವು ಪ್ರಾಂತಗಳಲ್ಲಿ ಹಂಚಿ ಹೋಗಿದ್ದ ಕನ್ನಡ ನಾಡನ್ನು ಏಕೀಕರಣಗೊಳಿಸಿ ನಾವೆಲ್ಲ ಕನ್ನಡಿಗರು ಒಂದು, ಕರ್ನಾಟಕ ಒಂದು ಎಂಬುದನ್ನು ಸಂಭ್ರಮಾಚರಣೆಗೆ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರಲಾಗಿದೆ.
ಕನ್ನಡಿಗರನ್ನು, ಕನ್ನಡ ಮನಸ್ಸುಗಳನ್ನು ಒಂದುಗೂಡಿಸಲು ನೂರಾರು ಹಿರಿಯ ಸಾಹಿತಿಗಳು, ಕವಿಗಳು, ವಿದ್ವಾಂಸರು ಹೋರಾಟ ಚಳುವಳಿ ಮಾಡುವ ಮೂಲಕ ಕನ್ನಡ, ಕರ್ನಾಟಕ ಕಟ್ಟುವ ಕಾರ್ಯವನ್ನು ಮಾಡಿದ್ದಾರೆ. ಕನ್ನಡ ನಾಡು, ನುಡಿ, ನೆಲ, ಜಲವನ್ನು ಸಂರಕ್ಷಿಸುವ ಗುರುತರವಾದ ಜವಾಬ್ದಾರಿ ನಮ್ಮ ಕನ್ನಡಿಗರ ಮೇಲಿದೆ ಎಂದರು.
ಗುರುರಕ್ಷೆ ಪಡೆದು ಮಾತನಾಡಿದ ಡಾ.ಜಿ.ಬಿ.ಬಿಡಿನಹಾಳ ಕಾಶೀ ಜಗದ್ಗರುಗಳು ಗದುಗಿನಲ್ಲಿ ಕೈಗೊಂಡಿದ್ದ ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನ ಮಾಲಿಕೆ ಜನಮನದಲ್ಲಿ ಧಾರ್ಮಿಕ ಸದ್ಭಾವನೆ ಮೂಡಿ ಬರಲು ಕಾರಣವಾಯಿತು, ಅದರ ಮುಂದುವರೆದ ಭಾಗವಾಗಿ ಶ್ರೀ ಸಿದ್ಧಾಂತ ಶಿಖಾಮಣಿ ಜ್ಞಾನಾಮೃತ ಮಾಸಿಕ ಕಾರ್ಯಕ್ರಮ ನಡೆದುಕೊಂಡು ಬಂದಿದ್ದು ಈ ಮಾಲಿಕೆ ಹೀಗೆ ಮುಂದುವರೆದು ಜನತೆಯಲ್ಲಿ ಧರ್ಮ ಜಾಗೃತಿ, ವೈಚಾರಿಕ ಪ್ರಜ್ಞೆ ಮೂಡಿಸಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಜ.ವಿಶ್ವಾರಾಧ್ಯ ಜ್ಞಾನಾಮೃತ ಸಮಿತಿಯ ಅಧ್ಯಕ್ಷ ವ್ಹಿ.ಕೆ.ಗುರುಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ.ಪಂಚಾಚಾರ್ಯ ವೇದ, ಆಗಮ ಸಂಸ್ಕøತ ಪಾಠಶಾಲೆಯ ವಟುಗಳಿಂದ ವೇದಘೋಷ ಜರುಗಿತು. ಅನ್ನಪೂರ್ಣ ಗಡಾದ ಹಾಗೂ ಶಾಂತಾ ಹಿರೇಮಠ ಪ್ರಾರ್ಥಿಸಿದರು ಪಾಠಶಾಲೆಯ ಮುಖ್ಯೋಪಾಧ್ಯಾಯ ಗುರುಸಿದ್ಧಯ್ಯ ಹಿರೇಮಠ ನಿರೂಪಿಸಿದರು ಕೊನೆಗೆ ಸಮಿತಿಯ ಕಾರ್ಯದರ್ಶಿ ಸಿ.ಜಿ.ಹಿರೇಗೌಡರ ವಂದಿಸಿದರು.
ವೇದಿಕೆಯ ಮೇಲೆ ಪ್ರಸಾದ ಭಕ್ತಿ ಸೇವೆ ವಹಿಸಿಕೊಂಡಿದ್ದ ಸಿ.ಜಿ.ಅಬ್ಬಿಗೇರಿಮಠ, ಜಯಲಕ್ಷ್ಮೀ ರಾಮಕೃಷ್ಣ ಮಹೇಂದ್ರಕರ ದಂಪತಿಗಳು, ಸಮಿತಿಯ ಗೌರವ ಅಧ್ಯಕ್ಷ ವ್ಹಿ.ಸಿ.ಧನ್ನೂರಹಿರೇಮಠ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸುಮಾ ನಾರಪ್ಪನವರ, ಸಂಗಮ್ಮ ಹಿರೇಮಠ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಶೀ ವಿಶ್ವನಾಥನ ಮಹಾ ಕಾರ್ತಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ದೀಪೋತ್ಸವ ಜರುಗಿತು. ಕಾರ್ಯಕ್ರಮದಲ್ಲಿ ವೀರೇಶ ಹೊಸಳ್ಳಿಮಠ, ಗೂಳಯ್ಯ ಮಾಲಗಿತ್ತಿಮಠ, ಬಿಂಗಿ, ಎಸ್.ಎಸ್.ಉಣ್ಣಿಮಠ, ರಾಜಶೇಖರ ವಸ್ತ್ರದ, ಶರಣಪ್ಪ ಬಳಿಗೇರ, ಕವಿತಾ ದಂಡಿನ ಸೇರಿದಂತೆ ಮುಂತಾದವರು ಪಾಲ್ಗೋಂಡಿದ್ದರು.