ಸಿದ್ಧಲಿಂಗೇಶ್ವರ ಪ್ರಕಾಶನದ 115 ಪುಸ್ತಕ ಲೋಕಾರ್ಪಣೆಒಳ್ಳೆಯ ಪುಸ್ತಕ ಒಳ್ಳೆಯ ಸಂಗಾತಿ:ಮಲ್ಲಿಕಾರ್ಜುನ ಹಿರೇಮಠ

ಕಲಬುರಗಿ,ಮಾ 25: ಒಳ್ಳೆಯ ಪುಸ್ತಕ ಒಳ್ಳೆಯ ಸಂಗಾತಿ,ಒಳ್ಳೆಯ ಸ್ನೇಹಿತ ಇದ್ದಂತೆ.ಓದಿನಿಂದ ನಿಜವಾದ ಸುಖ ಆನಂದ ಸಿಗುತ್ತದೆ ಎಂದು ಹಿರಿಯ ಸಾಹಿತಿ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಅವರು ಹೇಳಿದರು.
ಅವರಿಂದು ನಗರದ ಚೇಂಬರ್ ಆಫ್ ಕಾಮರ್ಸ ಸಭಾಂಗಣದಲ್ಲಿ
ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ,ಬಸವ ಪ್ರಕಾಶನದ 46 ನೇ ವಾರ್ಷಿಕೋತ್ಸವ ಮತ್ತು ಸಿದ್ಧಲಿಂಗೇಶ್ವರ ಪ್ರಕಾಶನ ಹೊರತಂದ 115 ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು,ಪುಸ್ತಕದ ಓದಿನಿಂದ ಲೇಖಕನ ಅನುಭವದ ಜೊತೆ ನಾವು ಒಂದಾಗುತ್ತೇವೆ.ಅದಕ್ಕಾಗಿ ಪುಸ್ತಕ ಓದಬೇಕು.ಒಳ್ಳೆಯ ಪುಸ್ತಕ ಮಾನವೀಯತೆ ಬೆಳೆಸುತ್ತದೆ.ಮಾನವನಾಗಲು ಸಾಹಿತ್ಯಕೃತಿಗಳ ಓದು ಸಹಕಾರಿಯಾಗಿದೆ.ದೇಶದಲ್ಲಿ ಇಂದು ಸಹಿಷ್ಣುತೆ ಮಾಯವಾಗುತ್ತಿದ್ದು,ಸಾಹಿತಿಗಳು,ಸಾಹಿತ್ಯ ಕೃತಿಗಳು ಮಾನವೀಯ ಮೌಲ್ಯ ಬೆಳೆಸಬೇಕು ಎಂದರು.
ಸಿಯುಕೆ ಕುಲಪತಿ ಪ್ರೊ ಬಟ್ಟು ಸತ್ಯನಾರಾಯಣ ಅವರು ಕಾರ್ಯಕ್ರಮ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರಭಟ್, ಗುಲಬರ್ಗ ವಿವಿ ಕುಲಸಚಿವ ಬಿ.ಶರಣಪ್ಪ ಅವರು ಆಗಮಿಸಿದರು.ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದ ಸಂಸ್ಥಾಪಕ ಬಸವರಾಜ ಕೊನೇಕ,ಡಾ.ಸ್ವಾಮಿರಾವ ಕುಲಕರ್ಣಿ,ಡಾ. ಗವಿಸಿದ್ದಪ್ಪ ಪಾಟೀಲ,ಡಾ.ಬಸವರಾಜ ಡೋಣೂರ ಅವರು ಸೇರಿದಂತೆ ಸಾಹಿತಿಗಳು,ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.ಪ್ರೊ ಶೈಲಜಾ ಕೊನೇಕ ಸ್ವಾಗತಿಸಿದರು.ಪ್ರೊ ಶಿವರಾಜ ಪಾಟೀಲ ನಿರೂಪಿಸಿದರು.