ಸಿದ್ಧರಾಮೇಶ್ವರ ಜಯಂತಿ ಆಚರಣೆ

ಸಿರವಾರ,ಜ.೧೬- ಜಗತ್ತಿಗೆ ತಮ್ಮ ವಚನಗಳ ಮೂಲಕ ಸಮಾನತೆಯನ್ನು ಸಾರಿ ಹೋಗಿರುವ ಮಹನಿಯರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಸಿದ್ಧರಾಮೇಶ್ವರರು ತಮ್ಮ ವಚನಗಳ ಮೂಲಕ ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ ಎಂದು ಪ.ಪಂಚಾಯತಿ ಸಮುದಾಯ ಸಂಘಟನಾಧಿಕಾರಿ ಹಂಪಯ್ಯ ಪಾಟೀಲ್ ಹೇಳಿದರು.
ಪಟ್ಟಣ ಪಂಚಾಯತಿಯಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಮಾಡಿದ ನಂತರ ಮಾತನಾಡಿ, ಅವರು ಸಿದ್ದರಾಯ ವಚನಗಳು ಇಂದಿಗೂ ಪ್ರಸ್ತುತವಾಗಿವೆ.
೧೨ನೇ ಶತಮಾನದಲ್ಲಿ ಸಿದ್ದರಾಮೇಶ್ವರರು ಜನರನ್ನು ಎಚ್ಚರಿಸುವ ಕೆಲಸ ಮಾಡಿದರು. ಸಮಾಜದಲ್ಲಿ ಬೇರೂರಿದ್ದ ಅನಿಷ್ಟ ಪಿಡುಗುಗಳನ್ನು ತೊಲಗಿಸಲು ಪ್ರಯತ್ನಿಸಿದರು. ಯುವ ಮುಖಂಡ ರಂಗನಾಥ ಬೋವಿ ಮಾತನಾಡಿ, ೧೨ನೇ ಶತಮಾನದಲ್ಲಿದ್ದ ಬಹಳಷ್ಟು ಪಿಡುಗುಗಳು, ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದ ವಚನ ಚಳುವಳಿಕಾರರಲ್ಲಿ ಸಿದ್ದರಾಮೇಶ್ವರರು ಕೂಡ ಪ್ರಮುಖರು.
ಇಂತಹ ಮಹಾನ್ ಶಿವಯೋಗಿಗಳ ಜಯಂತಿಯನ್ನು ಒಂದು ಜಾತಿಗೆ ಸೀಮಿತ ಮಾಡದೇ ಇಡೀ ಸಮಾಜಕ್ಕೆ ಅವರ ಕೊಡುಗೆ ಮಾದರಿಯಾಗಬೇಕು. ೬೮ ಸಾವಿರಕ್ಕೂ ಹೆಚ್ಚು ವಚನಗಳನ್ನು ಇವರು ರಚನೆ ಮಾಡಿರುವುದಾಗಿ ತಿಳಿದು ಬಂದಿದೆ. ಭೋವಿ ಸಮಾಜದ ಮುಖಂಡರಾದ ದುರುಗಪ್ಪ, ರಮೇಶ, ಚಂದ್ರು ರಾಜಾ, ಸಂತೋಷ ಪ.ಪಂಚಾಯತಿ ಸಿಬ್ಬಂದಿಗಳಾದ ಶರಣಬಸವ, ಸಚೀನ್ ಚ್ಯಾಗಿ, ವಿರೇಶ ನೇಕಾರ ಸೇರಿದಂತೆ ಇನ್ನಿತರರು ಇದ್ದರು. ಅದೇ ರೀತಿ ತಹಸೀಲ್ದಾರ ಕಛೇರಿಯಲ್ಲಿ, ತಾ.ಪಂ. ನೀರಾವರಿ ಇಲಾಖೆ, ಮಹಿಳಾ ಮತ್ತು ಮಕ್ಜಳ ಇಲಾಖೆ, ಜೆಸ್ಕಾಂ ಇಲಾಖೆ ಸೇರಿದಂತೆ ಸರ್ಕಾರಿ ಕಛೇರಿ ಶಾಲೆ ಕಾಲೇಜುಗಳಲ್ಲಿ ಆಚರಣೆ ಮಾಡಲಾಯಿತು.