ಸಿದ್ಧರಾಮೇಶ್ವರರು ಸಾಮಾಜಿಕ ಪರಿವರ್ತನೆಯ ಚೇತನಾಶಕ್ತಿ

ಕಲಬುರಗಿ:ಜ.14:ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಜರುಗಿದ ಸಾಮಾಜಿಕ ಸುಧಾರಣೆ ವಿಶ್ವದ ಇತಿಹಾಸದಲ್ಲಿಯೇ ಪ್ರಮುಖವಾಗಿದೆ. ಸೊಲ್ಲಾಪೂರದಲ್ಲಿ ಮತ್ತು ಅನುಭವ ಮಂಟಪದ ಮೂಲಕ ಅನೇಕ ಜನಪರ ಕಾರ್ಯಗಳನ್ನು ಮಾಡಿರುವ ಸಿದ್ಧರಾಮೇಶ್ವರರು, ಸಾಮಾಜಿಕ ಪರಿವರ್ತನೆಯ ಚೇತನಾಶಕ್ತಿಯಾಗಿ ಕಂಡುಬರುತ್ತಾರೆಂದು ಚಿತ್ತಾಪುರದ ಗಂಗಾಪರಮೇಶ್ವರಿ ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಡಾ.ಬಸವರಾಜ ವಾಡಿ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಶಿವನಗರದಲ್ಲಿರುವ ‘ಎಂ.ಎಂ.ಎನ್ ಟ್ಯೂಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ಶರಣ’ಸಿದ್ಧರಾಮೇಶ್ವರರ ಜಯಂತಿ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.
ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಮಾತನಾಡಿ, ಸಿದ್ಧರಾಮೇಶ್ವರರು ಸೊಲ್ಲಾಪುರದಲ್ಲಿ ಅನೇಕ ರಸ್ತೆ, ಛತ್ರಗಳು, ಕೆರೆ-ಕಟ್ಟೆ ನಿರ್ಮಿಸಿ, ಜನ ಹಾಗೂ ಪಶು-ಪಕ್ಷಿಗಳಿಗೆ ಅನಕೂಲ ಮಾಡಿಕೊಡುವ ಮೂಲಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದರು. ಕಾಯಕಯೋಗಿ, ಶಿವಯೋಗಿಯಾಗಿ ಅಪರೂಪದ ವ್ಯಕ್ತಿತ್ವ ಹೊಂದಿದ್ದ ಶರಣರು, ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂಬ ಅಂಕಿತನಾಮದೊಂದಿಗೆ ಅನೇಕ ವಚನಗಳನ್ನು ರಚಿಸಿ ಕನ್ನಡ ಸಾರಸತ್ವ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ವಚನಗಳ ಅಳವಡಿಕೆಯಿಂದ ಕಲ್ಯಾಣ ರಾಷ್ಟ್ರ ನಿರ್ಮಾಣವಾಗಲು ಸಾಧ್ಯವಿದೆಯೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸುನೀಲಕುಮಾರ ವಂಟಿ, ರಾಜಶೇಖರ ಬಿ.ಮರಡಿ, ಸೋಮಶೇಖರ ಬಿ.ಮೂಲಗೆ, ಬಸವರಾಜ ಎಸ್.ಪುರಣೆ, ವೀರೇಶ ಬೋಳಶೆಟ್ಟಿ ನರೋಣಾ, ಡಾ.ಪುತ್ತುರ,ಅಪ್ಪಾಸಾಬ್ ಅಷ್ಟಗಿ ಸೇರಿದಂತೆ ಮತ್ತಿತರರಿದ್ದರು.