ಸಿದ್ಧರಾಮಯ್ಯ ಭಾವಚಿತ್ರಕ್ಕೆ ಹಾಲಿನ ಅಭಿಷೇಕ

ಬೀದರ್:ಮೇ.17: ಮಾಜಿ ಮುಖ್ಯಮಂತ್ರಿ, ಸರ್ವಜನಾಂಗದ ಹಿತ ಬಯಸುವ ಭಾಗ್ಯಗಳ ಸರದಾರ ಸನ್ಮಾನ್ಯ ಸಿದ್ಧರಾಮಯ್ಯನವರಿಗೆ ಕಾಂಗ್ರೇಸ್ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು
ಕರ್ನಾಟಕ ರಾಜ್ಯ ಗೊಂಡ ಆದಿವಾಸಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಳಪ್ಪ ಅಡಸಾರೆ ಒತ್ತಾಯ ಮಾಡಿದ್ದಾರೆ.
ಜಿಲ್ಲಾ ಗೊಂಡ ಸಮಾಜ, ಕರ್ನಾಟಕ ರಾಜ್ಯ ಗೊಂಡ ಆದಿವಾಸಿ ಸಂಘದ ವತಿಯಿಂದ ಸಿದ್ಧರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲೆಂದು ಪ್ರಾರ್ಥಿಸಿ ನಗರದ ಕುಂಬಾರವಾಡ ಸಮೀಪದಲ್ಲಿರುವ ಬೀರಲಿಂಗೇಶ್ವರ ಮಂದಿರದಲ್ಲಿ ಒಂದು ಸಾವಿರದ ಒಂದು ನೂರು ತೆಂಗಿನಕಾಯಿ ಒಡೆದು, ಸಿದ್ಧರಾಮಯ್ಯನವರ ಭಾವಚಿತ್ರದ ಬೃಹತ್ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ ಮಾತನಾಡಿದರು. ಸಿದ್ಧರಾಮಯ್ಯ ಪ್ರಗತಿಯ ಹರಿಕಾರರು. ಕ್ಷೀರಭಾಗ್ಯ, ಅನ್ನಭಾಗ್ಯದಂತಹ ಹಲವು ಅರ್ಥಪೂರ್ಣ ಯೋಜನೆಗಳನ್ನು ಜಾರಿಗೆ ತಂದ ಬಡವರ ರಕ್ಷಕರಾಗಿದ್ದಾರೆ. 2023 ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೆ ತರುವ ಸಾಮಥ್ರ್ಯ ಇರುವುದು ಕೇವಲ ಸಿದ್ಧರಾಮಯ್ಯನವರಿಗೆ ಮಾತ್ರ. ಕರ್ನಾಟಕದ ಜನತೆ ಪ್ರೀತಿಸುವುದು ಸಿದ್ಧರಾಮಯ್ಯನವರಿಗೆ ಮಾತ್ರ. ಅವರೇ ಸಿಎಂ ಆಗಲೆಂದು ಜನಮತವಾಗಿದೆ. ಅಲ್ಪಸಂಖ್ಯಾತ, ಹಿಂದುಳಿದವರು, ದಲಿತರು ಹೀಗೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಸಿದ್ಧಾಂತದೊಂದಿಗೆ ಸಮೃದ್ಧ ಮತ್ತು ಸ್ವಚ್ಛ ಆಡಳಿತ ನೀಡುವ ಅರ್ಹತೆ ಹೊಂದಿದ ಏಕೈಕ ನಾಯಕ ಅವರಾಗಿದ್ದಾರೆ. ಇದುವರೆಗೂ ಅವರ ಮೇಲೆ ಭ್ರಷ್ಟಾಚಾರದ ಯಾವುದೇ ಕಪ್ಪುಚುಕ್ಕೆಗಳಿಲ್ಲ. ಅಲ್ಲದೇ ಇದು ಅವರ ಕೊನೆಯ ಚುನಾವಣೆಯಾಗಿದೆ. ಆದ್ದರಿಂದ ಕಾಂಗ್ರೇಸ್ ಹೈಕಮಾಂಡ್ ಐದು ವರ್ಷ ಸಿದ್ಧರಾಮಯ್ಯನವರಿಗೆ ಮುಖ್ಯಮಂತ್ರಿ ಮಾಡಬೇಕೆಂದು ಮಾಳಪ್ಪ ಅಡಸಾರೆ ಒತ್ತಾಯಿಸಿದರು.
ಇದೇ ವೇಳೆ ನಗರದ ಬೀರಲಿಂಗೇಶ್ವರ ಮಂದಿರದಲ್ಲಿ ಜಿಲ್ಲಾ ಗೊಂಡ ಸಮಾಜದ ಪದಾಧಿಕಾರಿಗಳು ಕಾರ್ಯಕರ್ತರು ಬೀರದೇವರಿಗೆ 1100 ತೆಂಗಿನಕಾಯಿ ಜಯಘೋಷಗಳ ಮೂಲಕ ಒಡೆದು ಅವರ ಭಾವಚಿತ್ರದ ಮೇಲೆ ಹಾಲಿನ ಅಭಿಷೇಕಗೈದರು. ಬಳಿಕ ನಗರದ ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಮಡಿವಾಳ ವೃತ್ತ ಸೇರಿದಂತೆ ಹಲವು ಮಹಾತ್ಮರ ವೃತ್ತಗಳಲ್ಲಿ ತೆಂಗಿನಕಾಯಿ ಒಡೆದು ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ಪ್ರಮುಖರಾದ ರಾಜಕುಮಾರ ಹಲಬುರ್ಗೆ, ಪಿ.ಎಸ್.ಇಟಕಂಪಳ್ಳಿ, ಮಚೇಂದ್ರ ಕಂದಗೊಂಡ, ಎಂ.ಎಸ್.ಕಟಗಿ, ಮಾರುತಿರಾವ ಶಾಖಾ,ಲೋಕೇಶ ಮರಜಾಪುರ, ರಾಜ್ ಟಗರು, ವಿಜಯಕುಮಾರ ಡುಮ್ಮೆ, ಈಶ್ವರ ಮಲಕಾಪುರ, ಕುಶಾಲ ಯರನಳ್ಳಿ, ಸಂಜೀವಕುಮಾರ ಡೊಳ್ಳಿ, ರಘುನಾಥ ಭೂರೆ ಸೇರಿದಂತೆ ಅನೇಕರು ಹಾಜರಿದ್ದರು.