
ಕೋಲಾರ,ಜು.೮- ಸಿದ್ದರಾಮಯ್ಯ ಅವರು ಮಂಡಿಸಿರುವ ೧೪ನೇ ಬಜೆಟ್‌ನಲ್ಲಿ ಕೋಲಾರವನ್ನು ಸಂಪೂರ್ಣವಾಗಿ ಕಡೆಗಣನೆ ಮಾಡಿದ್ದಾರೆ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ನ ಪರಾಜಿತ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಏಷ್ಯಾದಲ್ಲೇ ೨ನೇ ಅತಿ ದೊಡ್ಡ ಮಾರುಕಟ್ಟೆ ಎಂಬ ಪ್ರಸಿದ್ದಿ ಪಡೆದಿರುವ ಕೋಲಾರ ಮಾರುಕಟ್ಟೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪ ಇಲ್ಲ. ಮಾರುಕಟ್ಟೆಗೆ ೧೦೦ ಎಕರೆ ಪ್ರದೇಶವನ್ನು ಮೀಸಲು ಇಡಬೇಕಿತ್ತು ಆದರೆ ಇದೂ ಸಹ ಸಾಧ್ಯವಾಗಿಲ್ಲ. ಮಾರುಕಟ್ಟೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಕೋಲಾರ ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಕೆಸಿ ವ್ಯಾಲಿಯ ೩ನೇ ಹಂತದ ಶುದ್ಧೀಕರಣ ಘಟಕ ಪ್ರಸ್ತಾಪವಿಲ್ಲ. ಕೃಷಿ ಬೆಳೆಗಳಿಗೆ ಆಯಾ ಕಾಲಕ್ಕೆ ತಕ್ಕಂತೆ ಬೆಂಬಲ ಬೆಲೆ ಘೋಷಿಸಿಲ್ಲ ಪ್ರತಿ ಬಾರಿ ಬಜೆಟ್ ಮಂಡನೆಯ ಸಂದರ್ಭದಲ್ಲಿ ಕೋಲಾರ ಜಿಲ್ಲೆಗೆ ಬಜೆಟ್‌ನಲ್ಲಿ ಪೂರಕವಾದ ಅಂಶಗಳನ್ನು ನೀಡಲಿದ್ದಾರೆ ಎಂದು ಕಾತುರದಿಂದ ಕಾಯುವ ಜನರಿಗೆ ಈ ಭಾರಿಯ ಬಜೆಟ್ ಸಹ ನಿರಾಸೆ ಮೂಡಿಸಿದೆ ಎಂದು ಸಿಎಂಆರ್ ಶ್ರೀನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀರಾವರಿ ಯೋಜನೆಯಾದ ಯರಗೋಳ್, ಕೋಲಾರಕ್ಕೆ ರಿಂಗ್ ರೋಡ್, ಕೆಸಿ ವ್ಯಾಲಿ ಮೂರನೇ ಹಂತದ ಶುದ್ದೀಕರಣ ಮಾಡುವ ಕುರಿತು,
ಯರಗೋಳ್ ಡ್ಯಾಂ ತುಂಬಿ ಎರಡು ವರ್ಷ ಆಗಿದೆ, ಕುಡಿಯುವ ನೀರಿನ ಸರಬರಾಜು ಮಾಡಲು ಕ್ರಮ ವಹಿಸಿಲ್ಲ. ರೈತರು ನಷ್ಟಕ್ಕೆ ಒಳಗಾದಾಗ ಬೆಂಬಲ ಬೆಲೆ ನಿಗಧಿ ಮಾಡುವ ಆವರ್ತ ನಿಧಿಗೆ ಬಜೆಟ್‌ನಲ್ಲಿ ಹಣ ಮೀಸಲಿಡದೆ ರೈತರನ್ನು ಕಡೆಗಣಿಸಿದ್ದಾರೆ. ಇನ್ನು ಕೋಲಾರಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಸೇರಿದಂತೆ ಯಾವುದೇ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡದೆ ಕೋಲಾರ ಜಿಲ್ಲೆಯನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ದೂರಿದರು.
ಈ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೋಲಾರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಮೂರು ಬಾರಿ ಕೋಲಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ನಾನು ಸ್ಪರ್ಧಿಸಲಿ ಅಥವಾ ಯಾರೇ ಸ್ಪರ್ಧಿಸಿದರೂ ಕೋಲಾರ ಜಿಲ್ಲೆಗೆ ಸೂಕ್ತ ಅನುದಾನಗಳನ್ನು ನೀಡಿ ಕೋಲಾರ ಜಿಲ್ಲೆಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದಾಗಿ ಬೊಬ್ಬೆ ಹೊಡೆದು ಹೋಗಿದ್ದರು.
ಆದರೆ ಇಂದು ಬಜೆಟ್‌ನಲ್ಲಿ ಕೋಲಾರದ ಜನತೆ ಇಟ್ಟುಕೊಂಡಿದ್ದ ನಿರೀಕ್ಷೆ ಸುಳ್ಳಾಗಿದೆ. ಸಿದ್ಧರಾಮಯ್ಯನವರು ಕೋಲಾರ ಜಿಲ್ಲೆಯನ್ನು ನಿರ್ಲಕ್ಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೋಲಾರ ಜಿಲ್ಲೆಯಿಂದ ಆಯ್ಕೆಯಾಗಿರುವ ಶಾಸಕರು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೆ ಒತ್ತಡ ಹಾಕಿ ಜಿಲ್ಲೆಗೆ ಬೇಕಾದ ಅಂಶಗಳನ್ನು ಮುಂದಿನ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ನೀಡುವಂತೆ ಒತ್ತಾಯಿಸಬೇಕೆಂದು ಮನವಿ ಮಾಡಿದ್ದಾರೆ.