ಸಿದ್ಧರಾಮಯ್ಯ ಪ್ರಮಾಣವಚನ: ಅಭಿಮಾನಿಗಳಿಂದ ಸಂಭ್ರಮ

ಹುಬ್ಬಳ್ಳಿ,ಮೇ20: ರಾಜ್ಯದ ನೂತನ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಕುರುಬ ಸಮುದಾಯ ಹಾಗೂ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸಮುದಾಯದ ಜನರು, ಅಭಿಮಾನಿಗಳು ಜಮಾಯಿಸಿ, ಕೇಕ್ ಕತ್ತರಿಸುವ ಮೂಲಕ ಸಂತಸ ವ್ಯಕ್ತಪಡಿಸಿದರು. ಜೊತೆಗೆ ಡೊಳ್ಳು ಬಾರಿಸಿ ಕುಣಿದು ಕುಪ್ಪಳಿಸಿದರು. ನಗರ ಸೇರಿದಂತೆ ರಾಜ್ಯಾದ್ಯಂತ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಅಭಿಮಾನಿಗಳು ಪರಸ್ಪರ ಸಿಹಿ ಹಂಚುವ ಮೂಲಕ ಸಿದ್ದು ಅವರ ಭಾವಚಿತ್ರಗಳನ್ನು ಹಿಡಿದು ಅವರ ಪರ ಘೋಷಣೆಗಳನ್ನ ಕೂಗಿದರು.
ಅವರೊಬ್ಬ ಜಾತ್ಯಾತೀತ ನಾಯಕ, ಬಡವರ ಬಂಧು, ಅವರು ಮುಂದಿನ ಐದು ವರ್ಷಗಳ ಕಾಲ ಪೂರ್ಣಾವಧಿ ಆಳ್ವಿಕೆ ನಡೆಸಿ, ಬಡವರ ಕಣ್ಣೀರು ಒರೆಸುವ ಕೆಲಸ ಮಾಡಲಿ ಎಂದು ಅಭಿಮಾನಿಗಳು ತಿಳಿಸಿದರು.