ಸಿದ್ಧರಾಮಯ್ಯ ಒಳ ಮೀಸಲಾತಿ ಪರವೇ ಅಥವಾ ವಿರೋಧವೇ ಸ್ಪಷ್ಟಪಡಿಸಿ

ಕೋಲಾರ,ಜ,೯- ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಲಂಬಾಣಿ ಹಾಗೂ ಭೋವಿ ಸಮುದಾಯದವರಿಗೆ ಒಳ ಮೀಸಲಾತಿ ಬೇಡ ಎಂದು ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ನ್ಯಾ.ಸದಾಶಿವ ಆಯೋಗದ ವರದಿಯನ್ನು ತಡೆ ಹಿಡಿಯಲಾಗಿತ್ತು ಎಂದು ಹೇಳಿಕೆ ನೀಡಿರುವ ಕ್ರಮವನ್ನು ಕದಸಂಸ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಖಂಡಿಸಿದ್ದಾರೆ.
ನಗರದ ನಚಿಕೇತ ನಿಲಯದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆ ಮುಂಭಾಗದಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರೇ ಇಂದು ಅದೇ ಸಮುದಾಯಗಳಿಗೆ ಒಳ ಮೀಸಲಾತಿ ಬೇಕೇನ್ನುವ ನೀವು, ಸಮುದಾಯಗಳ ನಡುವೆ ಗೊಂದಲವನ್ನು ಸೃಷ್ಟಿಸಿ ರಾಜಕೀಯವನ್ನು ಮಾಡಲು ಹೊರಟಿರುವುದು ನಿಮಗೆ ಶೋಭೆ ತರುತ್ತದೆಯೇ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯನವರೇ ನೀವು ಒಳ ಮೀಸಲಾತಿ ಪರವೇ ಅಥವಾ ವಿರುದ್ಧವೇ ಎಂದು ಸ್ಪಷ್ಟಪಡಿಸಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದರು.
ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಗೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಗೆ ಆಗಮಿಸುತ್ತಿರುವ ತಾವು ತಾಲೂಕಿನಲ್ಲಿ ಎಸ್.ಸಿ.ಎಸ್.ಟಿ ಸಮುದಾಯದ ಐವತ್ತು ಸಾವಿರ ಮತಗಳಿದ್ದು, ಈ ರೀತಿಯ ಹೇಳಿಕೆಯನ್ನು ನೀಡಿರುವುದು ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜ. ೧೦ರಂದು ಒಳ ಮೀಸಲಾತಿ ಬೇಡ ಎನ್ನುವ ಇತರೆ ಉಪ ಜಾತಿಗಳು ಬೆಂಗಳೂರಿನ ಸಮಾವೇಶದಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗ ಬೇಡ ಎನ್ನುತ್ತಿದ್ದಾರೆ. ಅದರ ಬಗ್ಗೆ ಮಾಹಿತಿ ಇಲ್ಲದ ಉಪ ಜಾತಿಗಳು ಅರಿವಿಗೆ ಬಾರದೆ ಮಾತನಾಡುತ್ತಿದ್ದಾರೆ. ಇದು ಸಾಮಾಜಿಕ ನ್ಯಾಯದ ವಿರುದ್ಧ ಹೋರಾಟವಾಗಿದೆ ಸದಾಶಿವ ಆಯೋಗದ ವರದಿಯ ವಿರುದ್ಧ ಮಾಡುವ ಹೋರಾಟ ಬಗ್ಗೆ ಅರಿವಿಗೆ ಬರಬೇಕಿದೆ ಎಂದರು. ಸದಾಶಿವ ಆಯೋಗದ ವರದಿ ೧೦೧ ಜಾತಿಗಳಿಗೂ ಮೀಸಲಾತಿ ಜನಸಂಖ್ಯೆಗೆ ಅನುಗುಣವಾಗಿ ನೀಡುವುದಾಗಿದೆ. ಆದರೆ ಇದನ್ನು ಸಮರ್ಪಕವಾಗಿ ಅರ್ಥೈಸಿ ಕೊಳ್ಳದೆ ಸದಾಶಿವ ಆಯೋಗದ ವರದಿಯ ವಿರುದ್ಧ ಮಾಡುವ ಹೋರಾಟ ಬಗ್ಗೆ ಅರಿವುಂಟು ಮಾಡಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ, ಪದಾಧಿಕಾರಿಗಳಾದ ರೋಜಾರಪಲ್ಲಿ ವೆಂಕಟರಮಣ, ಸಂಪತ್ ಕುಮಾರ್, ಸಿ ಈರಪ್ಪ, ಗೋವಿಂದರಾಜು, ಕೆಜಿಎಫ್ ಶ್ರೀಧರ್, ಬಂಗಾರಪೇಟೆ ದೇಶಿಹಳ್ಳಿ ಶ್ರೀನಿವಾಸ್, ಕೋಲಾರ ಯಲ್ಲಪ್ಪ, ಬಂಗಾರಪೇಟೆ ನಗರ ಘಟಕ ಸಂಚಾಲಕ ಕನ್ನಯ್ಯ, ಜಗನ್ ಮಂಜುನಾಥ, ಇತರರು ಇದ್ದರು.