ಸಿದ್ಧರಬೆಟ್ಟ ಶ್ರೀಗಳ ಧಾರ್ಮಿಕ, ಸಾಮಾಜಿಕ ಸೇವೆ ಆದರ್ಶನೀಯ

ಕೊರಟಗೆರೆ, ಜು. ೨೬- ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿಗಳು ಸಮಾಜಕ್ಕೆ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆ ಮಾಡುವ ಮುಖಾಂತರ ಶ್ರೀ ಮಠವನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಸಿದ್ದಮಲ್ಲಯ್ಯ ತಿಳಿಸಿದರು.
ಪಟ್ಟಣದ ಮುಖ್ಯ ಬಸ್‌ಸ್ಟ್ಯಾಂಡ್ ವೃತ್ತದಲ್ಲಿ ಸ್ವಾಮೀಜಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಮಾತನಾಡಿದ ಅವರು, ತಾಲ್ಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠವನ್ನು ಕೆಲವು ವರ್ಷಗಳ ಹಿಂದೆ ಸ್ಥಾಪಿಸಿ ಪ್ರಥಮ ಪೀಠಾದ್ಯಕ್ಷರಾಗಿರುವ ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿ ಗಳು ತಮ್ಮ ಸಾಮಾಜಿಕ ಸೇವೆಯ ಮುಖಾಂತರ ಬಹು ಬೇಗ ಜನರ ಪ್ರೀತಿ ವಿಶ್ವಾಸವನ್ನುಗಳಿಸಿ ಶ್ರೀ ಮಠವನ್ನು ಬೆಳೆಸಿದರು. ಅಲ್ಲಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳಿಗೆ ಊಟ, ವಸತಿಯೊಂದಿಗೆ ವಿದ್ಯಾದಾನ ಮಾಡುತ್ತಿದ್ದಾರೆ.
ತಾಲ್ಲೂಕಿನ ಕೆರೆಗಳನ್ನು ಹೂಳೆತ್ತುವ ಮೂಲಕ ರೈತರಿಗೆ ನೇರವಾಗಿದ್ದಾರೆ. ಅವರ ೪೧ನೇ ಹುಟ್ಟು ಹಬ್ಬವನ್ನು ಕೊರಟಗೆರೆ ತಾಲ್ಲೂಕು ವೀರಶೈವ ಸಮಾಜ ಆಚರಿಸುತ್ತಿದೆ ಎಂದರು.
ಸಮಾಜದ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಮುಕ್ತಾಂಭ ಮಾತನಾಡಿ, ಸ್ವಾಮೀಜಿಯವರ ಸೇವೆ ಮತ್ತು ಧಾರ್ಮಿಕ ನೆಲಗಟ್ಟಿಗೆ ರಾಜ್ಯ ಸೇರಿದಂತೆ ಅಂತರ್‌ರಾಜ್ಯದಲ್ಲೂ ಭಕ್ತರಿದ್ದು ಸಮಾಜದ ಎಲ್ಲ ಜನಾಂಗವನ್ನು ಒಟ್ಟುಗೂಡಿಸಿಕೊಂಡು ಜಾತ್ಯಾತೀತವಾಗಿ ಶ್ರೀ ಮಠವನ್ನು ನಡೆಸುತ್ತಿದ್ದಾರೆ ಇಂತಹ ಪೂಜ್ಯರು ಅತಿ ವಿರಳ ಎಂದರು.
ಸಮಾಜದ ಮಹಿಳಾ ಜಿಲ್ಲಾ ನಿರ್ದೇಶಕಿ ಮಂಜುಳಾಆರಾಧ್ಯ ಮಾತನಾಡಿ, ಸ್ವಾಮೀಜಿಯವರು ಪ್ರತಿ ವರ್ಷ ನೂರಾರು ಸಾಮೂಹಿಕ ವಿವಾಹಗಳನ್ನು ಮಾಡಿಸಿದ್ದಾರೆ. ಈ ಬಾರಿ ತಾಲ್ಲೂಕಿನ ಅತ್ಯಂತ ಹಿಂದುಳಿದಿರುವ ಗ್ರಾಮವನ್ನು ದತ್ತು ಪಡೆದು ಅಭಿವೃಧ್ದಿಗೆ ಶ್ರಮಿಸುತ್ತಿದ್ದಾರೆ. ಕೊರೊನಾ ಸೇರಿದಂತೆ ವರುಣನ ಅತಿವೃಷ್ಠಿ ಮತ್ತು ಅನಾವೃಷ್ಟಿ ಸಂದರ್ಭದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಿ ಸಹಾಯಸ್ತ ನೀಡುವ ಮೂಲಕ ಸೇವೆ ಸಲ್ಲಿಸಿದ್ದಾರೆ. ನಾವೆಲ್ಲರೂ ಒಟ್ಟುಗೂಡಿ ಶ್ರೀಗಳ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವೀರಶೈವ ಸಂಘದ ಪದಾಧಿಕಾರಿಗಳಾದ ಮಲ್ಲಣ್ಣ, ಕೆ.ಎಂ.ಸುರೇಶ್, ಜಿ.ಎಂ.ಶಿವಾನಂದ, ಅರವಿಂದ, ನಾಗರಾಜು, ಶಿವಕುಮಾರ್, ನೀಲೇಶ್, ಚಂದ್ರಕಲಾಲೋಕೇಶ್, ಉಮಾಶಂಕರ್ ಮತ್ತಿತರರು ಉಪಸ್ಥಿತರಿದ್ದರು.