ಸಿದ್ಧಗಂಗಾ ಶ್ರೀಗಳ ಹುಟ್ಟುಹಬ್ಬ ಆಚರಣೆ

ಹುಳಿಯಾರು, ಏ. ೩- ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಭಕ್ತನೋರ್ವ ಅನೇಕ ವರ್ಷಗಳಿಂದ ಸ್ವಾಮೀಜಿಯ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ಹುಳಿಯಾರು ಭಾಗದ ಮನೆ ಮಾತಾಗಿದ್ದಾರೆ.
ಇಲ್ಲಿನ ರಾಮಗೋಪಾಲ ಸರ್ಕಲ್‌ನಲ್ಲಿರವ ಭೈರವೇಶ್ವರ ಮೆಡಿಕಲ್ಸ್‌ನ ಮಾಲೀಕ ಚನ್ನಬಸವಯ್ಯ ಅವರೇ ನಿರಂತರ ಹುಟ್ಟುಹಬ್ಬ ಆಚರಿಸುವ ಮೂಲಕ ಸ್ವಾಮೀಜೀಯವರ ಮೇಲಿನ ಭಕ್ತಿಭಾವ ಪ್ರದರ್ಶಿಸುತ್ತಿರುವ ವ್ಯಕ್ತಿಯಾಗಿದ್ದಾರೆ. ಇವರು ಡಾ.ಶಿವಕುಮಾರ ಸ್ವಾಮೀಜಿ ಅವರ ಮೇಣದ ಪ್ರತಿಮೆ ಸಹ ಮಾಡಿಸಿ ತನ್ನ ಮೆಡಿಕಲ್ ಸ್ಟೋರ್ ಮುಂಭಾಗ ಪ್ರತಿಷ್ಠಾಪಿಸಿದ್ದಾರೆ. ಈ ಪ್ರತಿಮೆಗೆ ನಿತ್ಯವೂ ಪೂಜೆ ಸಲ್ಲಿಸುವ ಜತೆಗೆ ಹುಟ್ಟುಹಬ್ಬ ಹಾಗೂ ದಾಸೋಹದ ದಿನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಗಮಿಸುವ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಸಹ ಮಾಡಿಸುತ್ತಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಡಾ.ಶಿವಕುಮಾರ ಸ್ವಾಮೀಜಿಯವರ ಹುಟ್ಟುಹಬ್ಬ ಆಚರಿಸಿದ್ದಾರೆ.
ಈ ವರ್ಷದ ಹುಟ್ಟುಹಬ್ಬ ಆಚರಣೆಯಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್ ಅವರು ಸಹ ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಆಯುರ್ವೇದ ವೈದ್ಯ ಡಾ.ಚಂದ್ರಧರ ಹರಕೆರೆ, ಡಾ.ಲಕ್ಷ್ಮೀ, ಕರವೇ ಅಧ್ಯಕ್ಷ ಬೇಕರಿ ಪ್ರಕಾಶ್, ಗ್ರಾ.ಪಂ. ಸದಸ್ಯ ಪ್ರಕಾಶ್, ಮಾಜಿ ಅಧ್ಯಕ್ಷ ಯೂಸೂಫ್, ಗಣಪತಿ ದೇವಸ್ಥಾನದ ತಮ್ಮಯ್ಯ, ಕರವೇಯ ಅಂಜನ್‌ಕುಮಾರ್, ಹರೀಶ್ ಸೊಸೈಟಿ ಬಸವರಾಜು, ಚಂದ್ರಣ್ಣ, ಲೋಕೇಶ್, ಪಾಂಡಪ್ಪ ಮತ್ತಿತರರು ಉಪಸ್ಥಿತರಿದ್ದರು.