ಸಿದ್ಧಗಂಗಾ ಶ್ರೀಗಳ ಜತೆ ಬದುಕಿದ್ದು ನಮ್ಮ ಪುಣ್ಯ: ರವೀಶಯ್ಯ

ತುಮಕೂರು, ಏ. ೩- ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು ಬದುಕಿದ್ದ ಸಮಯದಲ್ಲಿ ನಾವುಗಳು ಅವರೊಂದಿಗೆ ಇದ್ದದ್ದು ನಮ್ಮ ಜನ್ಮ ಸಾರ್ಥಕ. ಅವರ ಒಂದೊಂದು ಮಾತು ನಮ್ಮ ಜೀವನಕ್ಕೆ ಅರ್ಥಪೂರ್ಣ ಎಂದು ಜಿಲ್ಲಾ ಬಿಜೆಪಿ ಮುಖಂಡರಾದ ಹೆಚ್.ಎಂ.ರವೀಶಯ್ಯ ಹೇಳಿದರು.
ನಗರದ ೩೧ನೇ ವಾರ್ಡ್‌ನ ಶೆಟ್ಟಿಹಳ್ಳಿ ಮುಖ್ಯರಸ್ತೆಯ ನೃಪತುಂಗ ಬಡಾವಣೆ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದ್ದ ಡಾ. ಶ್ರೀ ಶಿವಕುಮಾರಸ್ವಾಮೀಜಿ ರವರ ೧೧೪ನೇ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪಾಲಿಕೆ ಸದಸ್ಯ ಸಿ.ಎನ್. ರಮೇಶ್ ಮಾತನಾಡಿ, ಈ ಹಿಂದೆ ಶ್ರೀಗಳ ಹುಟ್ಟುಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆದರೆ ಈಗ ಕೋವಿಡ್-೧೯ ಇರುವುದರಿಂದ ಸರಳವಾಗಿ ಅರ್ಥ ಗರ್ಭಿತವಾಗಿ ಆಚರಿಸುತ್ತಿದ್ದೇವೆ. ಶ್ರೀಗಳ ಹೆಜ್ಜೆ ಗುರುತು ಎಲ್ಲ ಕಡೆ ಇದೆ. ಅವರನ್ನು ಅನುಸರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು. ವೀರಶೈವ ಲಿಂಗಾಯತ ವೇದಿಕೆ ಮತ್ತು ೩೧ನೇ ವಾರ್ಡ್‌ನ ಎಲ್ಲ ನಾಗರಿಕರು ಬಂದು ಈ ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಿ ಶ್ರೀಗಳ ಆಶೀರ್ವಾದಕ್ಕೆ ಒಳಗಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತರಕಾರಿ ಮಹೇಶ್, ಪತ್ರಕರ್ತ ಕೆ.ಬಿ. ಚಂದ್ರಚೂಡಾ, ಉಪ್ಪಾರಹಳ್ಳಿ ಶಂಕರ್, ಮೋಹನ್, ಕೇಶವಮೂರ್ತಿ, ರಕ್ಷಿತ್, ವಿರೂಪಾಕ್ಷಯ್ಯ, ರುದ್ರೇಶ್, ವಿಕಾಸ್, ಕುಮಾರ್, ಜಗದೀಶ್, ಹೆಚ್.ಎಂ.ಟಿ. ರಾಜಶೇಖರ್, ನಾಗರಾಜಮೂರ್ತಿ ಸೇರಿದಂತೆ ಬಡಾವಣೆಯ ಎಲ್ಲ ಗಣ್ಯರು, ನಾಗರಿಕರು ಉಪಸ್ಥಿತರಿದ್ದರು.