ಸಿದ್ಧಗಂಗಾ ಮಠದ ಹಳೇ ವಿದ್ಯಾರ್ಥಿ ಭಕ್ತರಿಂದ ಸಂಚಾರಿ ದಾಸೋಹ

????????????????????????????????????

ಮಾರೆಪ್ಪ ನಾಯಕ
ಸಿರುಗುಪ್ಪ : ಕೋವಿಡ್-19 ನಿಯಂತ್ರಣಕ್ಕಾಗಿ ಸರ್ಕಾರವು ಕಠಿಣ ಲಾಕ್‍ಡೌನ್ ಘೋಷಣೆ ಮಾಡಿರುವುದರಿಂದ ತಾಲೂಕಿನಾದ್ಯಂತ ಪಾಸ್ಟ್ ಪುಡ್, ಹೋಟೆಲ್, ರೆಸ್ಟೋರೆಂಟ್ ಹಾಗೂ ಬೇಕರಿಗಳು ಬಂದ್ ಮಾಡಿರುವುದರಿಂದ ಗ್ರಾಮೀಣ ಪ್ರದೇಶದಿಂದ ವಿವಿಧ ಕೆಲಸ ಕಾರ್ಯಗಳಿಗಾಗಿ ನಗರಕ್ಕೆ ಬರುವ ಸಾರ್ವಜನಿಕರಿಗೆ ಯಾವುದೇ ಊಟ, ಉಪಹಾರ, ನೀರು ದೊರೆಯದೆ ಖಾಲಿ ಹೊಟ್ಟೆಯಿಂದ ನರಳಬಾರದೆನ್ನುವ ಉದ್ದೇಶದಿಂದ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಭಕ್ತವೃಂದದವರಿಂದ ಕೋವಿಡ್ ಸುರಕ್ಷತಾ ನಿಯಮಗಳನ್ನು ಅನುಸರಿಸಿ ಪ್ರತಿನಿತ್ಯವೂ ಒಂದು ಕ್ವಿಂಟಾಲ್‍ನಷ್ಟು ದಿನಕ್ಕೊಂದು ಪಲಾವ್, ಚಿತ್ರನ್ನ, ಪುಳಿಯೋಗರೆ ಮುಂತಾದ ಆಹಾರವನ್ನು ತಯಾರಿಸಿ ಸಂಚಾರಿ ದಾಸೋಹ ಮೂಲಕ ವಿತರಿಸಿದರು.
ತಾಲೂಕಿನಲ್ಲಿರುವ ಶ್ರೀಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ನೆನಪಿಗಾಗಿ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಭಕ್ತವೃಂದದವರು ನಗರದಲ್ಲಿ ಲಾಕ್‍ಡೌನ್ ಜಾರಿಯಾದ ದಿನದಿಂದ ನಿತ್ಯವೂ ಸಂಚಾರಿ ದಾಸೋಹ ನಡೆಸುತ್ತಾ ಆಹಾರದ ಪೊಟ್ಟಣಗಳನ್ನು ಪ್ರತಿನಿತ್ಯವೂ ನೂರಾರು ಜನರಿಗೆ ವಿತರಿಸಿ ಹಸಿದ ಹೊಟ್ಟೆಗೆ ಆಸರೆಯಾಗಿ ಮಾನವೀಯತೆ ಮೆರದರು.
ಮಠದ ಹಳೆಯ ವಿದ್ಯಾರ್ಥಿಗಳ ಬಳಗವು ನಗರದಲ್ಲಿರುವ ಸರ್ಕಾರಿ ಆಸ್ಪತ್ರೆ, ವಿವಿಧ ಸರ್ಕಾರಿ ಕಛೇರಿಗಳ ಮುಂಭಾಗ ಹಾಗೂ ರೈಸ್‍ಮಿಲ್‍ಗಳ ಮುಂದೆ ನಿಂತಿರುವ ನೂರಾರು ಜನರಿಗೆ ಆಹಾರದ ಪೊಟ್ಟಣದ ಜೊತೆಗೆ ಕುಡಿಯುವ ನೀರನ್ನು ಪೂರೈಕೆ ಮಾಡಿ ಹಸಿದವರ ಹೊಟ್ಟೆಯನ್ನು ತಂಪಾಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ನಗರಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳು, ಕೃಷಿ ಕೆಲಸಕಾರ್ಯಗಳಿಗೆ ಬೇಕಾದ ವಸ್ತುಗಳನ್ನು ಖರೀದಿಸಲು ಬರುವ ರೈತರು ಹಾಗೂ ಅತ್ಯವಸರದ ಕೆಲಸಕಾರ್ಯಗಳಿಗೆ ಬರುವ ನೂರಾರು ಸಾರ್ವಜನಿಕರು ಹಸಿವಿನಿಂದ ಬಳಲು ಬಾರದು ಎನ್ನುವ ಸದುದ್ದೇಶದಿಂದ ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಶ್ರೀಗಳ ಭಕ್ತರು ನಿತ್ಯ ದಾಸೋಹಕ್ಕಾಗಿ ಬೇಕಾದ ವಸ್ತುಗಳನ್ನು ನೀಡುತ್ತಿದ್ದು, ಇದರ ಉಸ್ತುವಾರಿಯನ್ನು ನೋಡಿಕೊಳ್ಳುವುದರ ಜೊತೆಗೆ ಆಹಾರದ ಪೊಟ್ಟಣಗಳನ್ನು ವಿತರಿಸಲು ಹಳೆಯ ವಿದ್ಯಾರ್ಥಿಗಳು ಟೊಂಕಕಟ್ಟಿ ನಿಂತು ಹಸಿವಿನಿಂದ ಬಳಲುವುದು ತಪ್ಪಿಸಿದಂತಾಗಿದೆ.
ಶ್ರೀಗಳ ಮಠದಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳಾದ ಅಶೋಕ್, ಮಂಜುನಾಥ, ಓತ್ತೂರು ಪಂಪಾಪತಿ, ನಂದೀಶ, ಬಸವಣ್ಣಸಾಹುಕಾರ, ಶರಣನಗೌಡ.ಎಸ್, ಬಸವರಾಜಗೌಡ, ಫಣೇಯ್ಯ, ತಿಪ್ಪನಗೌಡ, ಹೇಮಣ್ಣ, ಚಂದ್ರಣ್ಣ, ಎಂ.ಪಂಪನಗೌಡ, ಪಾರ್ತೇಶಗೌಡ, ಮೌನೇಶ, ಕ್ರಿಷ್ಣಾರೆಡ್ಡಿ, ಕೆ.ಗಿರೀಶ್ ಮುಂತಾದ ಯುವಕರ ತಂಡವು ಆಹಾರ ತಯಾರಿಕೆಯಿಂದ ಹಿಡಿದು ಆಹಾರದ ಪೊಟ್ಟಣಗಳನ್ನು ಸಾರ್ವಜನಿಕರಿಗೆ ವಿತರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.


ನಗರಕ್ಕೆ ವಿವಿಧ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರು ಹಸಿವಿನಿಂದ ಬಳಲಬಾರದು ಎನ್ನುವ ಉದ್ದೇಶದಿಂದ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಶ್ರೀಗಳ ಭಕ್ತರು ಸೇರಿಕೊಂಡು ಲಾಕ್‍ಡೌನ್ ಜಾರಿಯಾದಾಗಿನಿಂದ ನಿತ್ಯವೂ ನಗರದಲ್ಲಿ ಒಂದು ಕ್ವಿಂಟಾಲ್ ಆಹಾರದ ಪೊಟ್ಟಣಗಳನ್ನು ವಿತರಿಸುತ್ತಿದ್ದೇವೆ.
-ಮಠದ ಹಳೆಯ ವಿದ್ಯಾರ್ಥಿಗಳು

ನಾನು ಮತ್ತು ನನ್ನ ಹೆಂಡತಿಯು ಸೇರಿ ಬೆಳಿಗ್ಗೆ 6ಗಂಟೆಗೆ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಬಂದು ಬೆಳಗಿನ ಊಟ ನೀರು ಇಲ್ಲದೆ ಹಸಿದು ಕೊಂಡು ಆಸ್ಪತ್ರೆ ಮುಂದೆ ಕುಳಿತಾಗ ಸಿದ್ದಗಾಂಗ ಮಠದ ಭಕ್ತರು ನೀಡಿದ ಪ್ರಸಾದ ಸೇವಿಸಿ ಮಾತ್ರೆ ತೆಗೆದುಕೊಂಡವೆ, ಇಂತವರ ಸೇವೆ ಅನನ್ಯ ಎಂದು ಅಭಿಪ್ರಾಯಿಸಿದರು.
-ಶ್ರೀನಿವಾಸ, ಕೆಂಚನಗುಡ್ಡ ತಾಂಡ, ಸಿರುಗುಪ್ಪ ತಾಲೂಕು