
ಬೆಂಗಳೂರು/ತುಮಕೂರು,ಏ.೧- ನಡೆದಾಡುವ ದೇವರು ಸಿದ್ದಗಂಗಾ ಮಠಾಧೀಶರಾಗಿದ್ದ ಡಾ.ಶಿವಕುಮಾರ್ ಸ್ವಾಮೀಜಿ ಅವರ ೧೧೬ ನೇ ಜನ್ಮ ದಿನವಾದ ಇಂದು ಸಂಜೆ ಸಿದ್ದಗಂಗಾ ಮಠದ ಆವರಣದಲ್ಲಿ ಹಿರಿಯ ಸಂಗೀತ ನಿರ್ದೇಶಕ ಡಾ. ಹಂಸಲೇಖ ಸಾರಥ್ಯದಲ್ಲಿ ” ಹಂಸಗಾನ ವೈಭವ” ಸಂಗೀತ ರಸಸಂಜೆ ಹಮ್ಮಿಕೊಳ್ಳಲಾಗಿದೆ.
ಡಾ.ಹಂಸಲೇಖ ಅವರ ಬಹುದಿನದ ಕನಸಾದ ” ಐದನಿ ಸಂಗೀತ ಶಾಸ್ತ್ರ ವನ್ನು ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಮಹಾ ಸ್ವಾಮೀಜಿ ಅವರು ಸಂಜೆ ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಕುರಿತು ಮಾಹಿತಿ ಹಂಚಿಕೊಂಡ ಸಂಗೀತ ಬ್ರಹ್ಮ ಡಾ.ಹಂಸಲೇಖ ಅವರು, ಐದನಿಯ ಮೊದಲ ಭಾಗವಾದ “ಏಕದನಿ ಸಂಗೀತ ಶಾಸ್ತ್ರವನ್ನು ಪದ್ಮಶ್ರೀ ಚಿತ್ರ ಹಾಗು ಮಧುಬಾಲ ಕೃಷ್ಣ ಅವರು ಗಾಯನದ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.
ಏಪ್ರಿಲ್ ೧ ರನ್ನು ಜಗತ್ತಿನಲ್ಲಿ ಪೂಲ್ಸ್ ಡೇ – ಮೂರ್ಖರ ದಿನವಾಗಿ ಪ್ರಸಿದ್ದಿಯಾಗಿದೆ.ಆದರೆ ಇದೇ ಮಹಾನ್ ವ್ಯಕ್ತಿ ಪೂಜ್ಯ ಶಿವಕುಮಾರ ಸ್ವಾಮಿಗಳ ದಿನವನ್ನು ಇನ್ನು ಮುಂದೆ ” ಸ್ಕೂಲ್ ಡೇ ” ಶಾಲಾ ದಿನವನ್ನಾಗಿ ಆಚರಿಸುವಂತಾಗಬೇಕು ಎನ್ನುವ ಆಶಯ ವ್ಯಕ್ತಪಡಿಸಿದರು.
ವೀರಾಪುರದಲ್ಲಿ ಪ್ರತಿಮೆ ನಿರ್ಮಾಣದ ಜಾಗದಲ್ಲಿ ಅನುಭವ ಮಂಟಪದ ಮಾದರಿಯಲ್ಲಿ ವಿದ್ಯಾಭ್ಯಾಸ ಮಾಡುವ ದೊಡ್ಡ ಕೇಂದ್ರ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ವಿವರ ನೀಡಿದರು.
ಸ್ವಾಮೀಜಿ ಪ್ರತಿಮೆ :
ಡಾ.ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆಯನ್ನು ಸ್ವಾಮೀಜಿ ಹುಟ್ಟಾರಾದ ಮಾಗಡಿ ತಾಲ್ಲೂಕಿನ ವೀರಾಪುರದಲ್ಲಿ ನಿರ್ಮಾಣ ಮಾಡಲಿದ್ದು ಪ್ರತಿಮೆ ಪೂರ್ಣಗೊಳ್ಳುವ ತನಕ ಐದನಿ ಸಂಗೀತ ಮುಂದುವರಿಯಲಿದೆ ಎಂದು ಹಂಸಲೇಖ ಮಾಹಿತಿ ನೀಡಿದರು.
ಪ್ರತಿಮೆ ನಿರ್ಮಾಣ ಮಾಡುವ ಜಾಗದಲ್ಲಿ ಅನುಭವ ಮಂಟಪದ ರೀತಿ ಕೆಲಸ ಮಾಡಲಾಗುತ್ತಿದೆ. ಅದರ ಭಾಗವಾಗಿ ಸಂಗೀತ ಕಾರ್ಯಕ್ರಮ ನಡೆಯುತ್ತಿವೆ ಎಂದು ಮಾಹಿತಿ ಹಂಚಿಕೊಂಡರು
ಸಂಜೆ ನಡೆಯಲಿರುವ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಹಲವು ಗಾಯಕರು ಗಾನಸುಧೆ ಹರಿಸಲಿದ್ದಾರೆ.