
ಸಂಜೆವಾಣಿ ವಾರ್ತೆ
ದಾವಣಗೆರೆ ಸೆ. 11; ಶಿಕ್ಷಕರ ದಿನಾಚರಣೆಯನ್ನು ಸಾಮಾನ್ಯವಾಗಿ ಸಂಘ-ಸಂಸ್ಥೆಗಳವರು, ಗ್ರಾಮಸ್ಥರು ಆಚರಿಸಿ ಗೌರವಿಸುತ್ತಾರೆ. ಆದರೆ ನಗರದ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಮಕ್ಕಳು ತಮ್ಮ ಗುರುಗಳನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಗೌರವಿಸಿ ಅರ್ಥಪೂರ್ಣವಾಗಿ ಶಿಕ್ಷಕರ ದಿನಾಚರಣೆ ಆಚರಿಸಿದ್ದು ವಿಶೇಷ. ತಾವೇ ಸಂಘಟಿತರಾಗಿ, ನಾಯಕತ್ವ ವಹಿಸಿಕೊಂಡು ಪ್ರತಿಯೊಂದು ಚಟುವಟಿಕೆಯನ್ನು ಶಿಸ್ತಾಗಿ ನಡೆಸಿಕೊಟ್ಟರು. ತಮ್ಮ ಪ್ರೀತಿಯ ಪ್ರಾಚಾರ್ಯರಿಗೆ, ಉಪನ್ಯಾಸಕರಿಗೆ, ಬೋಧಕೇತರ ಸಿಬ್ಬಂದಿ ವರ್ಗದವರಿಗೆ, ವಾಹನ ಚಾಲಕರಿಗೆ, ಸಹಾಯಕರಿಗೆ ಪುಷ್ಪ ವೃಷ್ಠಿಗೈದು ಭಕ್ತಿಯಿಂದ ಕಾಲಿಗೆ ನಮಿಸಿದ ದೃಶ್ಯ ಭಾವಪೂರ್ಣವಾಗಿತ್ತು. ನಂತರ ಉಪನ್ಯಾಸಕರ ವಯೋಗುಣಕ್ಕನುಗುಣವಾಗಿ ವಿವಿಧ ಕ್ರೀಡೆಗಳನ್ನು ಏರ್ಪಡಿಸಿದ್ದರು. ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಮ್ಮ ಗುರುಗಳನ್ನು ರಂಜಿಸಿದ ಸನ್ನಿವೇಶ ಅತ್ಯಾಕರ್ಷಕವಾಗಿ ನಡೆಯಿತು.ಮಕ್ಕಳ ಈ ಪ್ರೀತಿಗೆ ಪದವಿ ಪೂರ್ವ ಕಾಲೇಜಿನ ಸಿಬ್ಬಂದಿ ವರ್ಗದವರು ಧನ್ಯತಾ ಭಾವದಿಂದ ಬಾಗಿದರು. ತಮ್ಮ ವೃತ್ತಿಗೆ ಮಕ್ಕಳು ತೋರಿದ ಈ ಪ್ರೀತಿಗೆ, ಭಕ್ತಿಗೆ, ಶ್ರದ್ಧೆಗೆ ಭಾವಪರವಶರಾದರು. ಪ್ರತಿವರ್ಷ ದ್ವಿತೀಯ ಪಿಯುಸಿ ಮಕ್ಕಳು ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದಾರೆಂದು ಸಂಸ್ಥೆಯ ನಿರ್ದೇಶಕ ಡಾ.ಜಯಂತ್ ತಿಳಿಸಿದರು. ಗುರು-ಶಿಷ್ಯ ಬಾಂಧವ್ಯ ಇದರಿಂದ ಗಟ್ಟಿಗೊಂಡು ಮಕ್ಕಳ ಆತ್ಮ ಸ್ಥೈರ್ಯ ಹೆಚ್ಚುತ್ತದೆ ಎಂದರು.