ಸಿದ್ಧಗಂಗಾ ಆಸ್ಪತ್ರೆಯಲ್ಲಿ ಇಎಸ್‌ಐ ಸೇವೆ ಲಭ್ಯ: ಸಿದ್ಧಲಿಂಗಶ್ರೀ

ತುಮಕೂರು, ನ. ೨೫- ಕಾರ್ಮಿಕವರ್ಗ ಆರೋಗ್ಯವಾಗಿದ್ದರೆ ಸದೃಢ ಸಮಾಜ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಆರೋಗ್ಯ ಸೇವೆ ನೀಡಲು ಸಿದ್ಧಗಂಗಾ ಆಸ್ಪತ್ರೆ ಇಎಸ್‌ಐ ಯೋಜನೆ ಅಳವಡಿಸಿಕೊಂಡಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು.
ಸಿದ್ಧಗಂಗಾ ಮೆಡಿಕಲ್ ಕಾಲೇಜಿನಲ್ಲಿ ಇಎಸ್‌ಐ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಸರ್ಕಾರದ ಆರೋಗ್ಯ ಯೋಜನೆಗಳಾದ ಆಯುಷ್ಮಾನ್ ಭಾರತ್, ಜ್ಯೋತಿ ಸಂಜೀವಿನಿ, ಸಂಪೂರ್ಣ ಸುರಕ್ಷಾ ಆರೋಗ್ಯ, ಎಬಿವೈ ಸೇವೆಗಳು ಲಭ್ಯವಿದ್ದು, ಸಿದ್ಧಗಂಗಾ ಮೆಡಿಕಲ್ ಕಾಲೇಜಿನಲ್ಲಿ ಸದ್ಯ ಲಭ್ಯವಾಗುತ್ತಿರುವ ಉಚಿತ ಸೇವೆಗಳೊಂದಿಗೆ ಈ ಯೋಜನೆಗಳು ದುಡಿಯುವ ವರ್ಗಕ್ಕೆ ಆರೋಗ್ಯ ಸಂಜೀವಿನಿಯಾಗಲಿವೆ ಎಂದರು.
ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ. ಎಸ್. ಪರಮೇಶ್ ಮಾತನಾಡಿ ಇಎಸ್‌ಐ ಸೇವೆಗಳು, ಸ್ಪೆಷಾಲಿಟಿ ಅಲ್ಲದೆ ಹೃದ್ರೋಗ, ನರರೋಗ, ಜೀರ್ಣಾಂಗ ಸಮಸ್ಯೆಗಳಂತಹ ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಒಳಗೊಂಡಿದ್ದು ಕಾರ್ಮಿಕ ವರ್ಗದವರು ಎರಡೂ ವಿಭಾಗದಲ್ಲಿ ಚಿಕಿತ್ಸೆ ಪಡೆಯಬಹುದು. ಜತೆಗೆ ಸದ್ಯದಲ್ಲಿಯೇ ಯಶಸ್ವಿನಿ ಯೋಜನೆ ಅಳವಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಿದ್ಧಗಂಗಾ ಮೆಡಿಕಲ್ ಕಾಲೇಜು ಪ್ರಾಂಶುಪಾಲರದಾ ಡಾ. ಶಾಲಿನಿ ಎಂ, ಮೆಡಿಕಲ್ ಕಾಲೇಜು ಮೇಲ್ವಿಚಾರಕ ಡಾ. ನಿರಂಜನಮೂರ್ತಿ, ಸಿಇಓ ಸಂಜೀವ್ ಕುಮಾರ್, ನರ್ಸಿಂಗ್ ವಿಭಾಗದ ಮುಖ್ಯಸ್ಥ ನಾಗಣ್ಣ, ಪಿಆರ್‌ಓ ಕಾಂತರಾಜು, ಈಶ್ವರ್ ಮತ್ತಿತರರು ಉಪಸ್ಥಿತರಿದ್ದರು.