ಸಿದ್ದೇಶ್ವರ ಸ್ವಾಮಿಯ ಭಕ್ತಿಭಾವದ ರಥೋತ್ಸವ

ಹಿರಿಯೂರು.ಏ. 4; ತಾಲೂಕಿನ ಸುಕ್ಷೇತ್ರ ವದ್ದಿಕೆರೆ ಶ್ರೀ ಕಾಲಭೈರವೇಶ್ವರ ಸ್ವಾಮಿ ಯಾನೆ ಶ್ರೀ ಸಿದ್ದೇಶ್ವರ ಸ್ವಾಮಿ ದೇವರ ಜಾತ್ರಾ ಮಹೋತ್ಸವ ಸೋಮವಾರ ಸಂಜೆ ಸಾವಿರಾರು ಜನ ಭಕ್ತರ ಸಮ್ಮುಖದಲ್ಲಿ ಭಕ್ತಿ ಭಾವದಿಂದ ಜರುಗಿತು. ಇದರ ಅಂಗವಾಗಿ ಪಲ್ಲಕ್ಕಿಯಲ್ಲಿ ಸ್ವಾಮಿಯನ್ನು ಕೂರಿಸಿಕೊಂಡು ಬಂದು ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ಬಣ್ಣ ಬಣ್ಣದ ಹೂವುಗಳು ಹೂವಿನ ಹಾರಗಳಿಂದ ರಥವನ್ನು ಸಿಂಗರಿಸಲಾಗಿತ್ತು ಸಾವಿರಾರು ಜನ ಭಕ್ತರು ಬಂದು ತಮ್ಮ ಹರಕೆಯಂತೆ ಹೂವು, ಹೂವಿನ ಹಾರ, ಪೂಜೆಗಳನ್ನು  ಸಮರ್ಪಿಸಿದರು ಸ್ವಾಮಿಯು ತೇರಿನ ಮೇಲೆ ಕೂರಿದ ತಕ್ಷಣ ಭಕ್ತರು ಘೋಷಣೆಗಳನ್ನು ಕೂಗಿದರು. ಬಾಳೆಹಣ್ಣು ಹೂವು ಉತ್ತತ್ತಿಗಳನ್ನು ರಥಕ್ಕೆ ಎಸೆಯುವ ದೃಶ್ಯ ಕಂಡು ಬಂತು. ಎಲ್ಲೆಲ್ಲೂ ಜನ ಸಾಗರವೇ ತುಂಬಿತ್ತು ಎತ್ತಿನಗಾಡಿ ಟ್ರ್ಯಾಕ್ಟರ್ ಬೈಕ್ ಆಟೋ ಎನ್ನದೆ ವಿವಿಧ ವಾಹನಗಳಲ್ಲಿ ಸುತ್ತಮುತ್ತಲಿನ ಜನ ಶ್ರೀ ವದ್ದಿಕೆರೆ ಸಿದ್ದೇಶ್ವರ ಸ್ವಾಮಿಯ ದರ್ಶನಕ್ಕೆಂದು ಆಗಮಿಸಿದ್ದರು. ಸ್ವಾಮಿಯ ಜಾತ್ರೆ ಅಂಗವಾಗಿ ಸಿಹಿ ತಿನಿಸುಗಳು ಬೆಂಡು ಬತ್ತಾಸು ಮಂಡಕ್ಕಿ ಅಂಗಡಿಗಳು ಮಕ್ಕಳ ಆಟಿಕೆ ಸಾಮಗ್ರಿಗಳು ಬಳೆ ಸರ ಅಲಂಕಾರಿಕ ವಸ್ತುಗಳ ಮಾರಾಟದ ಅಂಗಡಿಗಳು ಆಗಮಿಸಿದ್ದವು. ಚಿತ್ರದುರ್ಗ ಜಿಲ್ಲಾ ಉಪವಿಭಾಗಾಧಿಕಾರಿ ಆರ್ ಚಂದ್ರಯ್ಯ, ತಹಶೀಲ್ದಾರ್ ಪ್ರಶಾಂತ್ ಕೆ ಪಾಟೀಲ್ ಸೇರಿದಂತೆ ಅಧಿಕಾರಿ ವರ್ಗದವರು ಅನೇಕ ಜನಪ್ರತಿನಿಧಿಗಳು ಶ್ರೀ ಸಿದ್ದೇಶ್ವರ ಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.