ಸಿದ್ದೇಶ್ವರ ಶ್ರೀ ಜಿಲ್ಲೆಯ ಅಸ್ಮಿತೆ :ಡಾ. ಸತೀಶಕುಮಾರ ಹೊಸಮನಿ

ವಿಜಯಪುರ:ಜ.10: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ, ಗೋಳಗುಮ್ಮಟ, ಬಸವನ ಬಾಗೇವಾಡಿಯ ಬಸವ ಜನ್ಮಸ್ಥಳ ಸ್ಮಾರಕ, ಆಲಮಟ್ಟಿ ಜಲಾಶಯ ಜಿಲ್ಲೆಯ ಅಸ್ಮಿತೆಯೆಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸಾಹಿತಿ ಡಾ. ಸತೀಶಕುಮಾರ ಎಸ್. ಹೊಸಮನಿ ಹೇಳಿದರು.
ಇಲ್ಲಿನ ಬಸವ ಜನ್ಮಭೂಮಿ ಪ್ರತಿಷ್ಠಾನ ವತಿಯಿಂದ ಪಿಡಿಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಹಾಗೂ ರಾಜ್ಯಮಟ್ಟದ ವಚನ ವೈಭವ ನಿಮಿತ್ತ ನೀಡುವ ಬಸವವಿಭೂಷಣ ರಾಷ್ಟ್ರ, ಬಸವಭೂಷಣ ರಾಜ್ಯ ಪ್ರಶಸ್ತಿ ಪ್ರದಾನ ಮತ್ತು ಭಾವಬಾನು ಕವನ ಸಂಕಲನ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಕಲಿಯುಗದ ವಿವೇಕಾನಂದರಂತಿದ್ದ ಶತಮಾನದ ಸಂತ ಸಿದ್ದೇಶ್ವರ ಶ್ರೀ ಈಗ ನಮ್ಮೊಂದಿಗಿಲ್ಲ ಎಂಬುದೆ ಅರಗಿಸಿಕೊಳ್ಳಲಾಗದ ಕಹಿಸತ್ಯ ಎಂದರು.
ಮುಖ್ಯ ಅತಿಥಿ ಸಮಾಜಸೇವಕ ಚಂದ್ರಶೇಖರ ಚೌಧರಿ ಮಾತನಾಡಿ ಸಾಧನೆಯ ಶಿಖರ ಏರಲು ಪ್ರಶಸ್ತಿ ಪ್ರೇರಕ. ಅದರಲ್ಲೂ ಜಗಜ್ಯೋತಿ ಬಸವೇಶ್ವರರ ಹೆಸರಿನ ಪ್ರಶಸ್ತಿ ಪಡೆದವರೆಲ್ಲ ಭಾಗ್ಯಶಾಲಿಗಳು ಅಂತಹ ಗೌರವದ ಗರಿಮುಡಿದು ಮಾದರಿ ಬದುಕನ್ನು ಬಾಳುವುದೆ ನಿಜವಾದ ಜೀವನ ಎಂದರು.
ಕವಯತ್ರಿ ಈರಮ್ಮ ಬೋನೂರ ಅವರ ಭಾವಬಾನು ಕವನಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಚಾಣಕ್ಯ ಕರಿಯರ್ ಅಕಾಡೆಮಿಯ ಸಂಸ್ಥಾಪಕ ಮುಖ್ಯಸ್ಥ ಎನ್.ಎಂ. ಬಿರಾದಾರ ಮಾತನಾಡಿ, ಈ ಕೃತಿ ಮೌಲ್ಯಯುತವಾಗಿದ್ದು, ಕವಯತ್ರಿ ತಮ್ಮ ಮೊದಲ ಪ್ರಯತ್ನದಲ್ಲೆ ಭರವಸೆಯ ಬರಹಗಾರರಾಗಿದ್ದಾರೆ. ಈ ಗ್ರಂಥದಲ್ಲಿರುವ ಕವನಗಳು ಅರ್ಥಪೂರ್ಣವಾಗಿದ್ದು ಮಾರ್ಮಿಕವಾಗಿವೆ. ಅನೇಕ ಮಾನವೀಯ ಮೌಲ್ಯಗಳನ್ನು ಹೊಂದಿವೆ ಎಂದರು.
ಪಾವನ ಸಾನಿಧ್ಯ ವಹಿಸಿದ್ದ ಆಲಗೂರ-ಜಮಖಂಡಿಯ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಪ್ರಶಸ್ತಿಗಳು ಪ್ರತಿಭೆಯ ಮಾನದಂಡವಾಗಿದ್ದು, ಪುರಸ್ಕøತರ ಹೊಣೆಗಾರಿಕೆಯನ್ನು ಹೆಚ್ಚಿಸಿ ಮತ್ತಷ್ಟು ಸೇವೆ ಸಲ್ಲಿಸಲು ಪ್ರೇರೇಪಿಸುವ ಸಾಧನವಾಗಿದೆ ಎಂದರು.
ಪ್ರತಿಷ್ಠಾನದ ಸಂಚಾಲಕ ಸಾಹಿತಿ ಡಾ. ಮುರುಗೇಶ ಸಂಗಮ ಪ್ರಾಸ್ತಾವಿಕ ಮಾತನಾಡಿದರು, ಸಾಹಿತಿ ಸಿದ್ಧಲಿಂಗ ಮನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಈರಮ್ಮ ಬೋನೂರ ಅತಿಥಿಯಾಗಿದ್ದರು.
ಬಸವವಿಭೂಷಣ ರಾಷ್ಟ್ರ ಪ್ರಶಸ್ತಿಗೆ, ವಿಜಯಪುರದ ಗೋಪಾಲ ನಾಯಕ (ಪತ್ರಿಕೋದ್ಯಮ) ಸಂಗಮೇಶ ಬಬಲೇಶ್ವರ, ಚಂದ್ರಶೇಖರ ಚೌಧರಿ (ಸಮಾಜಸೇವೆ) ಶಿವಾನಂದ ಕಟ್ಟಿಮನಿ (ಕಾನೂನು) ಅಮೂಲ ಪಾಟೀಲ (ಕ್ರೀಡೆ) ಭೀಮರಾಯ ಗೊಂಗಡಿ(ಆಡಳಿತ) ಇಸ್ಲಾಂಪುರದ ಬಸವರಾಜ ನಾಶಿಪುಡಿ (ಸಮಾಜಸೇವೆ) ಕಾರವಾರದ ಎ.ಎನ್. ರಮೇಶ ಗುಬ್ಬಿ (ಸಾಹಿತ್ಯ) ಬಬಲೇಶ್ವರದ ಅಣ್ಣಾಸಾಹೇಬ ಸಾವಳಗಿ (ಸೈನಿಕ ಕ್ಷೇತ್ರ) ಯಂಭತ್ನಾಳದ ಡಾ. ಉಮೇಶ ಹಂಡಿ (ವೈದ್ಯಕೀಯ), ನರಸಲಗಿಯ ಭೀಮಪ್ಪ ನಾಗಾವಿ (ಶಿಕ್ಷಣ) ಜಮಖಂಡಿಯ ಅಪ್ಪಾಸಾಹೇಬ ಇನಾಮದಾರ (ವೈದ್ಯಕೀಯ)
ಬಸವಭೂಷಣ ರಾಜ್ಯ ಪ್ರಶಸ್ತಿಗೆ, ಬೆಂಗಳೂರಿನ ಡಾ. ಸತೀಶಕುಮಾರ ಹೊಸಮನಿ (ಆಡಳಿತ) ಗದುಗಿನ ವನಮಾಲಾ ಮಾನಶೆಟ್ಟಿ(ಸಂಗೀತ) ಮನಗೂಳಿಯ ಶಿವಾಜಿ ಮೋರೆ(ಸಾಹಿತ್ಯ) ಕಲಘಟಗಿಯ ರಮೇಶ ಬೇರುಡಗಿ (ಕಲೆ) ತಾಳಿಕೋಟಿಯ ಅವ್ವಣ್ಣಗೌಡ ಗೋನಾಳ(ಶಿಕ್ಷಣ) ಬಬಲೇಶ್ವರದ ಸಂಗಪ್ಪ ಪಡಗಾರ (ಸಂಘಟನೆ) ವಿಜಯಪುರದ ಎ.ಎಚ್.ಕೊಳಮಲಿ (ಸಾಹಿತ್ಯ) ಯಮಕನಮರಡಿಯ ಸೋಮಶೇಖರ ಹೊರಕೇರಿ (ಕಲೆ) ಐನಾಪುರದ ಗೋಪಾಲ ಇಂಚಗೇರಿ(ಹಾಸ್ಯ) ಬೆಳಗಾವಿಯ ಭಾರತಿ ಕುಡಚಿಮಠ (ವೈದಿಕ) ತೆಲಸಂಗದ ಮಲ್ಲನಗೌಡ ಬಿರಾದಾರ (ಕಲೆ) ವಿಜಯಪುರದ ಅಮರೇಶ ಸಾಲಕ್ಕಿ (ಶಿಕ್ಷಣ) ರಾಜ್ಯ ಪ್ರಶಸ್ತಿ ಪಡೆದರು.
ಶಿಕ್ಷಕ ಬಸನಗೌಡ ಬಿರಾದಾರ, ಮಲ್ಲಿಕಾರ್ಜುನ ತೊದಲಬಾಗಿ ನಿರ್ವಹಿಸಿದರು. ಡಾ. ಮಾಧವ ಗುಡಿ ನಿರೂಪಿಸಿದರು. ಸಾಹಿತಿ ಯಮನೂರಪ್ಪ ಅರಬಿ ವಂದಿಸಿದರು.