ಸಿದ್ದೇಶ್ವರ ಶ್ರೀಗಳ ನಡೆ, ನುಡಿ ಎಲ್ಲರಿಗೂ ಸ್ಪೂರ್ತಿ: ಸಚಿವ ಶಿವಾನಂದ ಪಾಟೀಲ

ವಿಜಯಪುರ, ಡಿ.29:ಶ್ರೀ ಸಿದ್ಧೇಶ್ವರ ಅಪ್ಪನವರ ನಡೆ ಮತ್ತು ನುಡಿ ನಮ್ಮೆಲ್ಲರಿಗೂ ಸ್ಪೂರ್ತಿ. ಜೀವನದಲ್ಲಿ ಏನು ಅಪೇಕ್ಷೆ ಪಡೆಯದೆ ಆಶಯಗಳು ಇಲ್ಲದ ಬದುಕನ್ನು ನಮಗ್ಯಾರಾದರು ಕಲಿಸಿದ್ದಾರೆ ಎಂದಾದರೆ ಅದು ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾ ಸ್ವಾಮೀಜಿಯವರು ಎಂದು ಜವಳಿ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ “ಗ್ರಾಮೀಣ ಜನರ ಬದುಕು” ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ 6ನೇ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗ ಎಲ್ಲಿಂದಲೋ ಜನ ಗೋಳಗುಮ್ಮಟ ನೋಡುವ ಬದಲು ಜ್ಞಾನ ಗುಮ್ಮಟವನ್ನು ನೋಡಲು ವಿಜಯಪುರಕ್ಕೆ ಬರುತ್ತಿದ್ದಾರೆ ಎಂದರೆ ಅವರ ವ್ಯಕ್ತಿತ್ವದ ಶಕ್ತಿ ನಮಗೆ ಅರ್ಥವಾಗುತ್ತದೆ. ಅವರು ಬದುಕು ಇಡೀ ಜಗತ್ತಿಗೆ ಒಂದು ಮಾರ್ಗದರ್ಶಕ ಎಂದರೆ ತಪ್ಪಾಗಲಾರದು. ಎಲ್ಲ ತತ್ವಜ್ಞಾನಿಗಳನ್ನು ನಾವು ನೋಡಲು ಸಾಧ್ಯವಾಗಲಿಲ್ಲ ಬದಲಿ ಎಲ್ಲ ತತ್ವಜ್ಞಾನಿಗಳ ಕುರಿತು ಶ್ರೀ ಸಿದ್ಧೇಶ್ವರ ಅಪ್ಪನವರ ಮಾತಿನ ಮೂಲಕ ನಾವು ಕಂಡಿದ್ದೇವೆ ಎಂದು ಹೇಳಿದರು.

ಶ್ರೀ ಅಪ್ಪನವರು ತಮ್ಮ ಕೊನೆಯ ದಿನಗಳಲ್ಲಿ ತೆಗೆದುಕೊಂಡು ನಿರ್ಣಯ ಇಡೀ ಸಂತ ಕೂಲಕ್ಕೆ ಮಾದರಿ. ಅಂತಹ ಒಬ್ಬ ಮಾಹನ್ ಸಂತನನ್ನು ನಾವು ಕಳೆದುಕೊಂಡು ಬಡವರಾಗಿದ್ದೇವೆ. ಅವರ ಹೆಸರಿನಲ್ಲಿ ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಿ ಅವರಿದ್ದಾಗಲೂ ಅವರ ಭಕ್ತರಾಗಿ ಅವರು ಇರದೆ ಇದ್ದಾಗಲೂ ಅವರ ಭಕ್ತರಾಗಿ ಅವರ ಆಶಯದಂತೆ ನಡೆಯೋಣ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಪೂರ ಮಾತನಾಡಿ, ತತ್ವಜ್ಞಾನಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಬಗ್ಗೆ ಅಧ್ಯಯನವಾಗಬೇಕು ಮತ್ತು ಪಠ್ಯಕ್ರಮದಲ್ಲಿ ಅವರು ಸೇರುವಂತಹ ಕೆಲಸ ಆಗಬೇಕು ಇಲ್ಲಿ ಕರ್ನಾಟಕ ಸರಕಾರ ಸಚಿವರಾದ ಶಿವಾನಂದ ಪಾಟೀಲ ಅವರು ಇಲ್ಲಿದ್ದಾರೆ. ಅವರ ಮೂಲಕ ನಾನು ಪ್ಲೇಟೊ ಮತ್ತು ಅರಿಸ್ಟಾಟಲ್ ಅವರ ಮಾದರಿಯಲ್ಲಿ ಅಪ್ಪನವರ ಅಧ್ಯಯನಕ್ಕೆ ಅವಕಾಶ ಮಾಡಿಕೊಡಬೇಕೆಂದು ರಾಜ್ಯ ಸರಕಾರಕ್ಕೆ ವಿನಂತಿ ಮಾಡುತ್ತೇನೆ ಎಂದರು.

ಬಯಲಲ್ಲಿ ಬಯಲಾಗಿ ಹೋಗಿ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದ ಶ್ರೀ ಸಿದ್ಧೇಶ್ವರ ಅಪ್ಪನವರಿಗೆ ನಾವು ಎಷ್ಟು ಕೃತಜ್ಞತರಾಗಿದ್ದರೂ ಸಹ ಕಡಿಮೆಯೇ. ಅವರನ್ನು ನಮ್ಮ ಮನಸ್ಸಿನಲ್ಲಿ ನೆನೆದರೆ ಸಾಕು ಬೇರೆ ಎಲ್ಲ ವಿಷಯಗಳು ಮರೆ ಮಾಚಿ ಹೋಗುತ್ತವೆ. ಅಂತಹ ಮಹಾನ್ ಸಂತನ ಜೊತೆ ನಾವು ಜೀವಿಸಿದ್ದೇವು ಎಂದು ಹೇಳಿಕೊಳ್ಳುವುದೇ ಒಂದು ಭಾಗ್ಯ ಎಂದರು.

ಕಾರ್ಯಕ್ರಮದಲ್ಲಿ ಬೆಳಗಾವಿಯ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜ ಜಿಗಜಿಂಪಿ ತಮ್ಮ ಅನುಭಾವವನ್ನು ಹಂಚಿಕೊಂಡು, ಜಗತ್ತಿನಲ್ಲಿ ಇಂದು ಎಲ್ಲ ಹಳ್ಳಿಗಳು ಬದಲಾಗಿವೆ. ಆದರೆ ಆ ಸ್ವಚ್ಛ. ಸುಂದರ ಸಂತೋಷದ ಬದುಕನ್ನು ನಾವು ಇಂದಿಗೂ ಹಳ್ಳಿಗಳಲ್ಲಿ ನೋಡುತ್ತಿದ್ದೇವೆ ಎಂದರು.

ನಾನು ಶ್ರೀ ಸಿದ್ಧೇಶ್ವರ ಅಪ್ಪನವರ ಜೊತೆ ನಾವು ನೂರಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇವೆ. ಅವರ ಜೊತೆ ಅಮೇರಿಕಾದಲ್ಲಿಯೂ ನಡೆದಂತಹ ಕಾರ್ಯಕ್ರಮಗಳಲ್ಲಿ ನಾವು ಅವರ ಜೊತೆ ಇದ್ದೇವು. ಅಪ್ಪನವರು ತಮ್ಮ ನುಡಿಗಳಲ್ಲಿ ಹಳ್ಳಿಯ ಶ್ರಮದ ಬುದುಕಿನ ಬಗ್ಗೆ, ಗ್ರಾಮೀಣ ಸೊಗಡಿನ ಬಗ್ಗೆ ಬಹಳ ಚಂದವಾಗಿ ಹೇಳುತ್ತಿದ್ದರು. ಅಲ್ಲಿಯ ಬದುಕಿನ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದರು ಅಪ್ಪನವರ ಮಾತಿನಂತೆ ನೂರಕ್ಕೆ ನೂರರಷ್ಟು ಸತ್ಯ ಗ್ರಾಮೀಣ ಭಾಗದ ಬದುಕನ್ನು ಬೇರೆ ಎಲ್ಲಿಯೂ ನಾವು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಹಳ್ಳಿಗಳಲ್ಲಿ ಇಂದಿಗೂ ಅತ್ಯಂತ ಗೌರವಯುತವಾಗಿ ಪರಸ್ಪರ ಪ್ರೀತಿ, ಗೌರವ ನೀಡಿ ಬದುಕುತ್ತಾರೆ. ಆದರೆ ನಗರಗಳಲ್ಲಿ ಪ್ರಸ್ತುತ ದಿನಮಾನದಲ್ಲಿ ಮನುಷ್ಯರಿಗೆ ಕಿಮ್ಮತ್ತಿಲ್ಲದಂತಾಗಿ. ಬರೀ ದುಡ್ಡಿಗೆ ಬೆಲೆ ಕೊಡುವ ವ್ಯವಸ್ಥೆಗಳು ಬರುತ್ತಿವೆ. ಅದು ಬದಲಾಗಬೇಕು ನಾವು ಯಾವಾಗಲೂ ಹಣಕ್ಕಿಂತ ಗುಣಕ್ಕೆ ಬೆಲೆ ಕೊಡಬೇಕು. ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಅಪ್ಪನವರಂತಹ ಗುಣಗಳನ್ನು ಸ್ವಲ್ಪವಾದರೂ ನಾವು ನಮ್ಮ ಮಕ್ಕಳಲ್ಲಿ ಬಿತ್ತಬೇಕು. ಜ್ಞಾನವನ್ನು ಕೊಡುವ ಜಗತ್ತನ್ನು ಬೆಳಗುವಂತಹ ಜಗಜ್ಯೋತಿಯಾಗಬೇಕು ಅಂದಾಗ ಬದುಕಿಗೊಂದು ಅರ್ಥ ಸಿಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಗದಗ ನಗರದ ಜಗದ್ಗುರು ಶಿವಾನಂದ ಮಠದ ಪೂಜ್ಯ ಶ್ರೀ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಲಕ್ಷಾಂತರ ಜನರಿಗೆ ದೀಪವಾಗಿ ಬೆಳಕು ನೀಡುತ್ತಿದ್ದ ನಕ್ಷತ್ರ ಒಂದನ್ನು ಕಳೆದುಕೊಂಡು ಇಂದು ನಾವೆಲ್ಲೂರು ಅಂಗಳದಲ್ಲಿ ಕುಳಿತುಕೊಂಡು ಹುಡುಕುವಂತಾಗಿದೆ ಎಂದು ಹೇಳಿದರು.

ಶ್ರೀ ಸಿದ್ಧೇಶ್ವರ ಅಪ್ಪನವರು ನಮ್ಮೆಲ್ಲರ ಬಾಳಲ್ಲಿ ಬಂದು ನಮನ್ನು ಭಾಗ್ಯವಂತರನ್ನಾಗಿ ಮಾಡಿದ್ದಾರೆ. ಅವರ ತತ್ವಗಳು, ಮಾತುಗಳು ಇಂದಿಗೂ ನಮ್ಮ ಮನಸ್ಸಿನಲ್ಲಿ ಹಸಿರಾಗಿಯೇ ಉಳಿದಿವೆ. ಅವರು ತಮ್ಮ ಮಾತುಗಳಲ್ಲಿ ಹೇಳುತ್ತಿದ್ದರು. ಅವರಿಗೆ ಅತ್ಯಂತ ಪ್ರೀಯವಾದ ಬದುಕೇ ಗ್ರಾಮೀಣ ಬದುಕು. ಅವರು ಹಳ್ಳಿಗಳಿಗೆ ಪ್ರವಚನಕ್ಕೆ ಹೋಗಬೇಕೆಂದರೆ ಅತ್ಯಂತ ಸಂತೋಷದಿಂದ, ಆನಂದದಿಂದ ಹೋಗುತ್ತಿದ್ದರು.

ಅಪ್ಪನವರ ಮಾತಿನಂತೆ ಅತ್ಯಂತ ಶ್ರೀಮಂತ ಬದುಕು ಎಂದರೆ ಅದು ಗ್ರಾಮೀಣ ಬದುಕು. ಅಲ್ಲಿರುವಷ್ಟು ಶ್ರೀಮಂತಿಕೆ ಮತ್ತೆಲ್ಲೂ ಇರಲು ಸಾಧ್ಯವಿಲ್ಲ. ಗ್ರಾಮೀಣ ಭಾಗದಲ್ಲಿ ಕೋರ್ಟು, ಕಛೇರಿ ಬದುಕಲ್ಲ ಅಲ್ಲಿಯ ಕಲಾಪಗಳು ಅಲ್ಲಿಯ ಪಂಚಾಯತಿ ಕಟ್ಟೆಯಲ್ಲಿಯೇ ಬಗೆ ಹರಿದು ಮತ್ತೆ ಅನ್ಯೋನ್ಯತೆಯಿಂದ ಬದುಕುವ ಜನ ಹಳ್ಳಿಯ ಜನ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಗ್ರಾಮೀಣ ಬದುಕು ಅತ್ಯಂತ ಆನಂದಮಯ ಬದುಕು. ನಮ್ಮ ಸಂಸ್ಕøತಿ ನಮ್ಮತನ ಇನ್ನು ಉಳಿದಿದೆ ಎಂದಾದರೆ ಅದು ಗ್ರಾಮೀಣ ಭಾಗದಲ್ಲಿ ಮಾತ್ರ. ನಮ್ಮೆಲ್ಲರ ಅಪ್ಪನವರಾದ ಶ್ರೀ ಸಿದ್ಧೇಶ್ವರ ಅಪ್ಪಾಜೀಯವರು ತಮ್ಮ ಮಾತುಗಳಲ್ಲಿ ಸದಾ ಗ್ರಾಮೀಣ ಬದುಕಿನ ಬಗ್ಗೆ ಅದರ ವೈಶಿಷ್ಟ್ಯತೆ ಬಗ್ಗೆ ತಿಳಿಸುತ್ತಿದ್ದರು. ಅಲ್ಲಿಯ ಬದುಕೆ ಅತೀ ಸುಂದರ. ಅಲ್ಲಿರುವ ಅನೋನ್ಯತೆಯನ್ನು ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಮಲಕನದೇವರ ಹಟ್ಟಿಯ ಮಲ್ಲಿಕಾರ್ಜುನ ಭಜನಾ ಮಂಡಳಿ ಪ್ರಾರ್ಥನಾ ಗೀತೆ ಹಾಡಿದರು. ಹಾಗೂ ಕಾಖಂಡಕಿಯ ಶ್ರೀ ಚನ್ನಪ್ಪ ತೋಟಕರ್ ಹಳ್ಳಿಯ ಹಾಡು ಹಾಡಿದರು. ಡಾ.ಸೋಮಶೇಖರ ವಾಲಿ ಸ್ವಾಗತಿಸಿ ಪರಿಚಯಿಸಿದರು, ಪೂಜ್ಯ ಶ್ರೀ ಪ್ರಭುಲಿಂಗ ಮಹಾಸ್ವಾಮೀಜಿ ನಿರೂಪಿಸಿದರು.