ಸಿದ್ದೇಶ್ವರ ಶ್ರೀಗಳ ಗುರು ನಮನ ಕಾರ್ಯಕ್ರಮ ಯಶಸ್ವಿಗೆ ಪ್ರಾಮಾಣಿಕ ಪ್ರಯತ್ನ: ಸಚಿವ ಎಂ.ಬಿ. ಪಾಟೀಲ

ಸಂಜೆವಾಣಿ ವಾರ್ತೆ,
ವಿಜಯಪುರ:ಡಿ.11:ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಅಪ್ಪಾಜಿಯವರ ಈ ಪವಿತ್ರವಾದ ಗುರುನಮನ ಕಾರ್ಯಕ್ರಮವನ್ನು ನಾವೆಲ್ಲರೂ ಪಕ್ಷಾತೀತವಾಗಿ ಅಚ್ಚುಕಟ್ಟಾಗಿ ಕೆಲಸ ಮಾಡುವ ಮೂಲಕ ಯಶಸ್ವಿಗೊಳಿಸುತ್ತೇವೆ ಎಂದು ಬಿಎಲ್‍ಡಿಇ ಸಂಸ್ಥೆಯ ಅಧ್ಯಕ್ಷ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ಬರುವ ಜನೆವರಿ 1 ಮತ್ತು 2 ರಂದು ಶ್ರೀ ಜ್ಞಾನಯೋಗಾಶ್ರಮದ ಲಿ. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಗುರುನಮನ ಕಾರ್ಯಕ್ರಮ ಪ್ರಯುಕ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಶ್ರೀ ಸಿದ್ದೇಶ್ವರ ಅಪ್ಪಾಜಿಯವರು ಪಕ್ಷಾತೀತವಾಗಿದ್ದಂತವರು. ತಮ್ಮ ಜ್ಞಾನದಾಸೋಹದ ಮೂಲಕ ಜಗತ್ತಿನ ಗಮನ ಸೆಳೆದಂತವರು. ಈ ಶತಮಾನ ಕಂಡ ಅತ್ಯಂತ ಶ್ರೇಷ್ಠ ಸಂತರು ಮತ್ತು ಅವರು ನಮ್ಮ ವಿಜಯಪುರ ಜಿಲ್ಲೆಯ ಕಳಸವಿದ್ದಂತೆ. ಅವರ ಬಗ್ಗೆ ಎಲ್ಲರಿಗೂ ಒಂದು ಅಪಾರವಾದ ಗೌರವವಿದೆ. ದೇಶಾದ್ಯಂತ ಅವರ ಭಕ್ತರಿದ್ದಾರೆ. ಹೀಗಾಗಿ ಭಕ್ತಿ ಸಮರ್ಪಣೆ ಮತ್ತು ಗುರುನಮನ ಹೆಸರಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಅತ್ಯಂತ ಸುಂದರವಾಗಿ ಮತ್ತು ಶಾಂತವಾಗಿ ನೆರವೇರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ಆಶ್ರಮದ ಜೊತೆ ನಾವೆಲ್ಲರೂ ಸೇರಿ ಅತ್ಯಂತ ಗೌರವಪೂರ್ವಕವಾಗಿ ಮತ್ತು ವ್ಯವಸ್ಥಿತವಾಗಿ ಮತ್ತು ಪಕ್ಷಾತೀತವಾಗಿ ಈ ಕಾರ್ಯಕ್ರಮವನ್ನು ನಡೆಸಲು ಶ್ರಮಿಸುತ್ತೇವೆ ಎಂದರು.
ಅಪ್ಪಾಜಿಯವರು ತಮ್ಮ ಜೀವನದುದ್ದಕ್ಕೂ ನೀಡಿದಂತಹ ಕೊಡುಗೆ ಅಪಾರ. ಅವರು ಯಾವಾಗಲೂ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ, ಶಾಂತಯುತವಾಗಿ ನಡೆಯಬೇಕೆಂದು ಬಯಸುತ್ತಿದ್ದರು. ಹೀಗಾಗಿ ಅವರ ಆಶಯದಂತೆಯೇ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು.
ಸಭೆಯಲ್ಲಿ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗಿಯಾಗುವ ನಿರೀಕ್ಷೆ ಇದ್ದು, ಸ್ಥಳದ ಬಗ್ಗೆ ಪರಿಶಿಲಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಪಾರ್ಕಿಂಗ್ ಸಮಸ್ಯೆಯಾಗಂತಹ ಸೂಕ್ತವಾದ ಮತ್ತು ಬರುವ ಜನರಿಗೆ ಸರಳವಾಗಿ ಸ್ಥಳವನ್ನು ಆಯ್ಕೆ ಮಾಡಿ ಮುಂದಿನ ಎಲ್ಲ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ಕಾರ್ಯಕ್ರಮ ನಡೆಯುವ ಎರಡು ದಿನಗಳ ಕಾಲದ ಪ್ರಸಾದ ವ್ಯವಸ್ಥೆಯನ್ನು ಬಿಎಲ್‍ಡಿಇ ಸಂಸ್ಥೆಯೇ ನೋಡಿಕೊಳ್ಳುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಆಲಮಟ್ಟಿ ಶ್ರೀಗಳು ಮಾತನಾಡಿ, ಶ್ರೀ ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮದ ನಿಮಿತ್ತವಾಗಿ ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಪ್ಪಾಜಿಯವರ ಆಸಕ್ತದಾಯಕ ವಿಷಯಗಳ ಮೇಲೆ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಲವಾರು ಜ್ಞಾನಿಗಳು ಭಾಗವಹಿಸಲಿದ್ದಾರೆ. ಡಿ. 23ರಿಂದ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು ಪ್ರತಿ ದಿನವೂ ಪ್ರಸಾದ ವ್ಯವಸ್ಥೆ ಇರುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
ಈ ಸಭೆಯಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿಯವರು, ಉಪಾಧ್ಯಕ್ಷಶ್ರೀ ಹರ್ಷಾನಂದ ಸ್ವಾಮೀಜಿಯವರು, ಶಾಸಕ ವಿಠಲ ಕಟಕದೊಂಡ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಯುವಭಾರತ ಸಮಿತಿ ಅಧ್ಯಕ್ಷ ಉಮೇಶ ಕಾರಜೋಳ, ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಸಂಗಮೇಶ ಬಬಲೇಶ್ವರ, ಸಚಿವ ಎಂ.ಬಿ ಪಾಟೀಲರ ಆಪ್ತ ಸಹಾಯಕ ಮಹಾಂತೇಶ ಬಿರಾದರ, ಸಂಗು ಸಜ್ಜನ ಮುಂತಾದವರು ಉಪಸ್ಥಿತರಿದ್ದರು.