ಸಿದ್ದೇಶ್ವರ ಶ್ರೀಗಳು ವಿಶ್ವದ ಶ್ರೇಷ್ಠ ಸಂತ

ಭಾಲ್ಕಿ:ಜ.4:ಸಿದ್ದೇಶ್ವರ ಶ್ರೀಗಳು ವಿಶ್ವದ ಶ್ರೇಷ್ಠ ಸಂತ ಅವರ ಅಗಲಿಕೆ ರಾಜ್ಯ ಮತ್ತು ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಬೆಂಗಳೂರಿನ ತಮ್ಮ ಗೃಹ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಿದ್ದೇಶ್ವರ ಶ್ರೀಗಳ ನುಡಿನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಶ್ರೀಗಳು ಡಾ.ಚನ್ನಬಸವ ಪಟ್ಟದ್ದೇವರ ಒಡನಾಡಿ ಆಗಿದ್ದರು. ನಮ್ಮ ತಂದೆ ಭೀಮಣ್ಣ ಖಂಡ್ರೆ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಇತ್ತಿಚಿಗೆ ವಿಜಪೂರದ ಆಶ್ರಮದಲ್ಲಿ ಶ್ರೀಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೆ, ಆ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ನಮ್ಮ ತಂದೆಯ ಹೇಗಿದ್ದಾರೆ. ಅವರ ಆರೋಗ್ಯ ಹೇಗಿದೆ ಎಂದು ವಿಚಾರಿಸಿದನ್ನು ಸ್ಮರಿಸಿದ ಅವರು,ಶ್ರೀಗಳು ಜ್ಞಾನ ಯೋಗಿಗಳಾಗಿದ್ದರು. ಅವರ ಪ್ರವಚನದ ಮೂಲಕ ಲಕ್ಷಾಂತರ ಭಕ್ತರು ತಮ್ಮ ಬದುಕು ಹಸನಾಗಿಸಿ ಕೊಂಡಿದ್ದರು. ಶ್ರೀಗಳ ಸಹಜ, ಸರಳತೆ ಎಲ್ಲರಿಗೂ ಮಾದರಿಯಾಗಿದೆ. ಅವರು ದೈಹಿಕವಾಗಿ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಕೂಡ ಅವರ ಚಿಂತನೆ, ಆದರ್ಶ ಸದಾ ಸದಾಕಾಲ ನಮ್ಮೊಂದಿಗೆ ಇರುತ್ತವೆ. ಅವರು ತೋರಿದ ದಾರಿಯಲ್ಲಿ ಎಲ್ಲರೂ ಸಾಗುವ ಪ್ರಯತ್ನ ಮಾಡೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ತು ಮಾಜಿ ಸದಸ್ಯ ಶರಣಪ್ಪ ಮಟ್ಟೂರು, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಶಶಿಧರ ಕೋಸಂಬೆ, ರವಿ ಬೋರವೆಲ್ಸ್ ಮಾಲೀಕ ರವೀಂದ್ರ ಚಿಡಗುಪ್ಪೆ, ಗುತ್ತಿಗೆದಾರ ರಾಜಕುಮಾರ ಬಿರಾದಾರ್, ಸೀತಾ ಸೇರಿದಂತೆ ಹಲವರು ಇದ್ದರು.