
ದಾವಣಗೆರೆ, ಏ. ೨೪- ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂಬ ಹೇಳಿಕೆಯನ್ನು ಬಿಜೆಪಿಯವರು ತಿರುಚಿಲ್ಲ. ಸಿದ್ಧರಾಮಯ್ಯನವರು ಆ ರೀತಿ ಮಾತನಾಡಿರುವ ವಿಡಿಯೋ ಇದೆ. ಹೀಗಿದ್ದರೂ ಸಿದ್ದರಾಮಯ್ಯನವರೇ ತಮ್ಮ ಮಾತನ್ನು ಬದಲಾಯಿಸುತ್ತಿದ್ದಾರೆ. ಹೇಳಿಕೆ ತಿರುಚುತ್ತಿರುವುದು ಸಿದ್ಧರಾಮಯ್ಯ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಯಾವುದನ್ನು ತಿರುಚಕ್ಕೆ ಬರುವುದಿಲ್ಲ. ವಿಡಿಯೋ ಇದ್ದೆ ಇರುತ್ತದೆ. ಹೀಗಿರುವಾಗ ಸಿದ್ಧರಾಮಯ್ಯನವರು ಲಿಂಗಾಯತ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಿ ನಾನು ಬಸವರಾಜಬೊಮ್ಮಾಯಿ ಅವರ ಬಗ್ಗೆ ಮಾತ್ರ ಮಾತನಾಡಿದ್ದೆ ಎಂದು ಹೇಳುತ್ತಿದ್ದಾರೆ. ಜನರೇನು ದಡ್ಡರಲ್ಲ ಎಂದರು.ಸಿದ್ಧರಾಮಯ್ಯನವರ ಮಾತು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಸಿದ್ಧರಾಮಯ್ಯನವರೇ ಉಲ್ಟಾ ಹೊಡೆಯುತ್ತಿದ್ದಾರೆ. ಈಗ ಏನನ್ನೂ ತಿರುಚಲು ಆಗುವುದಿಲ್ಲ ಎಂದರು.
ಬಿಜೆಪಿಗೆ ಪ್ಲಸ್ ಆಗುತ್ತೆ
ಲಿಂಗಾಯತ ಸಮುದಾಯಕ್ಕೆ ಸಂಬಂಧಿಸಿದಮಂತೆ ಕಾಂಗ್ರೆಸ್ ನಾಯಕರ ಮಾತುಗಳು ಬಿಜೆಪಿಗೆ ಪ್ಲಸ್ ಆಗುತ್ತೆ. ಈ ಬಾರಿ ಲಿಂಗಾಯತ ಮತಗಳು ಬಿಜೆಪಿಗೆ ಹೆಚ್ಚಾಗಿ ಬರಲಿವೆ ಎಂದರು.ಬಿಜೆಪಿ ಈ ಚುನಾವಣೆಯಲ್ಲಿ ಹೆಚ್ಚಿನ ಮತಗಳಿಸಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಅವರು ಹೇಳಿದರು.
ಶೆಟ್ಟರ್, ಸವದಿ ಕಾಂಗ್ರೆಸ್‌ಗೆ ಹೋಗಿದ್ದು ಬಿಜೆಪಿಗೆ ಪ್ಲಸ್ ಆಗಲಿದೆ. ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿ ಕಾಂಗ್ರೆಸ್‌ಗೆ ಹೋಗಿದ್ದಕ್ಕೆ ಇವರಿಬ್ಬರ ಕ್ಷೇತ್ರದಲ್ಲಿ ವಿರೋಧವು ವ್ಯಕ್ತವಾಗಿದೆ ಎಂದರು.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲರೂ ಪ್ರಚಾರ ಮಾಡುತ್ತಿದ್ದಾರೆ. ರಾಷ್ಟ್ರೀಯ ನಾಯಕರುಗಲು ಪ್ರಚಾರಕ್ಕೆ ಬರುತ್ತಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ರಾಹುಲ್ ಪ್ರವಾಸ ವ್ಯಂಗ್ಯ
ರಾಜ್ಯದಲ್ಲಿ ಚುನಾವಣಾ ಪ್ರವಾಸ ನಡೆಸುತ್ತಿರುವ ರಾಹುಲ್ ಗಾಂಧಿ ಅವರು ತೋರಿಕೆಗಾದರೂ ಮಠ ಮಾನ್ಯ ಸುತ್ತುತ್ತಿರುವುದು ಒಳ್ಳೆಯದು ಎಂದು ವ್ಯಂಗ್ಯವಾಡಿದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು, ರಾಹುಲ್‌ಗಾಂಧಿ ಎಲ್ಲಿ ಪ್ರಚಾರ ಮಾಡಿದರೂ ಏನೂ ಆಗಲ್ಲ. ಅವರು ಪ್ರಚಾರ ನಡೆಸಿದ ಕಡೆ ಕಾಂಗ್ರೆಸ್‌ನ ಸ್ಥಿತಿ ಏನಾಗಿದೆ ಎಂಬುದು ಹಳೆಯ ದಾಖಲೆ ತೆಗೆದು ನೋಡಿದರೆ ಗೊತ್ತಾಗುತ್ತದೆ ಎಂದು ಗೇಲಿ ಮಾಡಿದರು.
ಚನ್ನಗಿರಿಯಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ಅವರ ಪುತ್ರನ ಪರ ಪ್ರಚಾರ ನಡೆಸುತ್ತಿರುವುದನ್ನು ಹೈಕಮಾಂಡ್ ಗಮನಿಸುತ್ತಿದೆ ಎಂದ ಅವರು, ಮಾಡಾಳು ಅವರ ವಿಷಯ ಈಗಾಗಲೇ ಮುಗಿದ ವಿಚಾರ. ನಾನು ಅವರ ಜತೆಯಾಗಲಿ, ಅವರ ಪುತ್ರನ ಜತೆಯಾಗಲಿ ಒಂದು ವಾರದಿಂದ ಸಂಪರ್ಕದಲ್ಲೇ ಇಲ್ಲ ಎಂದರು.
ಡಿಕೆಶಿ ವಿರುದ್ಧ ಕಿಡಿ
ಬಿಜೆಪಿ ಭಾವನೆಗಳ ಜತೆ ಆಟವಾಡುತ್ತಿದೆ. ಡಿಕೆಶಿ ಹೇಳಿಕೆಗೆ ಕಿಡಿಕಾರಿದ ಬೊಮ್ಮಾಯಿ, ಲಿಂಗಾಯತ ವಿವಾದಗಳನ್ನು ತೆಗೆದಿದ್ದೆ ಕಾಂಗ್ರೆಸ್‌ನವರು ಡಿಕೆಶಿ ಹೇಳುವುದು ಒಂದು, ಮಾಡೋದು ಇನ್ನೊಂದು ಎಂದು ಹರಿಹಾಯ್ದರು.
ಹೈಕಮಾಂಡಾ ತೀರ್ಮಾನ
ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಕೂಸು ಹುಟ್ಟುವುದಕ್ಕಿಂತ ಮುಂಚೆ ಕುಲಾವಿ ಹೊಲಿಯುವುದು ಬೇಡ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.ಈ ಸಂದರ್ಭದಲ್ಲಿ ಸಂಸದ ಜಿ. ಎಂ. ಸಿದ್ಧೇಶ್ವರ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.