ಸಿದ್ದು ಹೇಳಿಕೆಗೆ ಬೊಮ್ಮಾಯಿ ಕೆಂಡಾಮಂಡಲ

ಬೆಂಗಳೂರು,ಏ.೨೩:ಲಿಂಗಾಯತ ಮುಖ್ಯಮಂತ್ರಿಗಳು ರಾಜ್ಯವನ್ನು ಹಾಳು ಮಾಡಿದ್ದಾರೆ ಎಂಬ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಂಡಾಮಂಡಲರಾಗಿದ್ದಾರೆ. ಸಿದ್ದರಾಮಯ್ಯರವರ ಹೇಳಿಕೆ ನೋವು ತಂದಿದೆ ಎಂದು ತಿಳಿಸಿದ್ದಾರೆ.
ಬಸವ ಜಯಂತಿ ಪ್ರಯುಕ್ತ ವಿಧಾನಸೌಧ ಮುಂಬಾಗ ಅಶ್ವಾರೂಢ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಲಿಂಗಾಯತ ಸಮುದಾಯದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವುದು ಸರಿಯಲ್ಲ. ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅವರ ಗೌರವ-ಘನತೆಗೆ ತಕ್ಕದ್ದಲ್ಲ. ಈ ಹೇಳಿಕೆಗೆ ಮುಂದಿನ ದಿನಗಳಲ್ಲಿ ರಾಜ್ಯದ ಜನರೇ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಬಸವ ತತ್ವದ ಆಧಾರದ ಮೇಲೆ ಮುಂದುವರೆಯುತ್ತೇವೆ ಎಂದು ಹೇಳಿದ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಮತ್ತೊಮ್ಮೆ ಆರ್ಶೀವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಳೆ ದಾವಣಗೆರೆ, ಧಾರವಾಡ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸುವುದಾಗಿ ಬೊಮ್ಮಾಯಿ ತಿಳಿಸಿದರು.
ಸಿದ್ದು ಹೇಳಿಕೆಗೆ ಅಶೋಕ್ ಖಂಡನೆ
ಲಿಂಗಾಐತ ಮುಖ್ಯಮಂತ್ರಿಗಳು ರಾಜ್ಯವನ್ನು ಹಾಳು ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಕಂದಾಯ ಸಚಿವ ತೀವ್ರವಾಗಿ ಖಂಡಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೋದಿ ಉಪನಾಮ ಹೇಳಿಕೆ ಕುರಿತು ಆ ಸಮುದಾಯಕ್ಕೆ ಘಾಸಿ ಉಂಟು ಮಾಡಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡು ರಾಹುಲ್‌ಗಾಂಧಿ ಫುಟ್ಪಾತ್ ಪಾಲಾಗಿದ್ದಾರೆ ಎಂದು ಲೇವಡಿ ಮಾಡಿದರು.
ಈ ಹಿಂದೆ ಸಿದ್ದರಾಮಯ್ಯರವರು ವೀರಶೈವ ಲಿಂಗಾಯತ ಹೆಸರಿನಲ್ಲಿ ಸಮುದಾಯವನ್ನು ಇಬ್ಬಾಗ ಮಾಡಲು ಹೊರಟಿದ್ದಾಗ ಸಿದ್ದರಾಮಯ್ಯರವರಿಗೆ ತಕ್ಕಪಾಠ ಕಲಿಸಿದ್ದರು. ಆದರೂ ಅವರಿಗೆ ಬುದ್ಧಿ ಬಂದಿಲ್ಲ ಎಂದು ಕಟಕಿಯಾಡಿದರು.
ಕಾಂಗ್ರೆಸ್ ಪಕ್ಷದ ಸರ್ವನಾಶಕ್ಕೆ ಸಿದ್ದರಾಮಯ್ಯರವರೇ ಅಡಿಗಲ್ಲು ಹಾಕಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದರು.
ಇದೇ ವೇಳೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಸಿದ್ದರಾಮಯ್ಯ ರಾಜ್ಯದ ೭ ಕೋಟಿ ಜನರಿಗೆ ಅವಮಾನ ಮಾಡಿದ್ದಾರೆ. ಇದರಿಂದ ಸಿದ್ದರಾಮಯ್ಯರವರ ಒಂದು ಮುಖ ಬಯಲಾದಂತಾಗಿದೆ.
ಈ ಹಿಂದೆ ಲಿಂಗಾಯತ ಸಮಾಜ ಒಡೆಯಲು ಯತ್ನಿಸಿದ್ದರು. ಅವರಿಗೆ ಲಿಂಗಾಯತರ ಮೇಲೆ ಇರುವ ಭಾವನೆ ಈ ಹೇಳಿಕೆಯಿಂದ ವ್ಯಕ್ತವಾಗಿದೆ ಎಂದು ಮೂದಲಿಸಿದರು.
ಮೋದಿ ಸಮುದಾಯ ಅವಮಾನಿಸಿ ರಾಹುಲ್‌ಗಾಂಧಿ ಶಿಕ್ಷೆಗೆ ಗುರಿಯಾಗಿ ಲೋಕಸಭಾ ಸದಸ್ಯತ್ವದಿಂದ
ಅನರ್ಹಗೊಂಡಿದ್ದಾರೆ. ಇದೇ ರೀತಿ ಸಿದ್ದರಾಮಯ್ಯರವರಿಗೂ ಶಿಕ್ಷೆಯಾಗಬೇಕು ಎಂದು ಹೇಳಿದರು.