ಸಿದ್ದು ಹೇಳಿಕೆಗೆ ಬಿಎಸ್‌ವೈ ಕಿಡಿ

ಶಿವಮೊಗ್ಗ, ಏ. ೨೪- ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂಬ ಸಿದ್ಧರಾಮಯ್ಯ ಬಹಳ ಹಗುರವಾಗಿ ಮಾತನಾಡಿದ್ದಾರೆ. ಅದಕ್ಕೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಉತ್ತರ ಕೊಡುತ್ತೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಎಂಬುದನ್ನು ಮರೆತು ಮಾತನಾಡುತ್ತಿದ್ದಾರೆ. ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂಬ ಅವರ ಹೇಳಿಕೆ ಅವರಿಗೆ ಶೋಭೆ ತರಲ್ಲ ಎಂದರು.
ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವುದು ನಿಶ್ಚಿತ ಎಂದು ಹೇಳಿದರು.
ಬಿಜೆಪಿಯ ಮುಖಂಡ ಬಿ.ಎಲ್. ಸಂತೋಷ್ ಪಕ್ಷ ಸಂಘಟನೆಗೆ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಅದನ್ನು ಸಹಿಸುವುದಿಲ್ಲ. ಅವರೊಬ್ಬ ಹಿರಿಯ ರಾಜಕೀಯ ಮುತ್ಸದಿ. ಅವರ ಬಗ್ಗೆ ಟೀಕೆ ಮಾಡುವ ಯೋಗ್ಯತೆ ಯಾರಿಗೂ ಇಲ್ಲ ಎಂದರು.
ಕಾಂಗ್ರೆಸ್‌ನ ರಾಹುಲ್‌ಗಾಂಧಿ ಅವರು ಲಿಂಗಾಯತ ಮಠಗಳಿಗೆ ಹೋಗಿ ಲಿಂಗಾಯತ ವೀರಶೈವ ಸಿದ್ಧಾಂತದ ಬಗ್ಗೆ ಮಾತನಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ರಾಹುಲ್‌ಗಾಂಧಿ ಅವರಿಗೆ ವೀರಶೈವ ಲಿಂಗಾಯತರ ಬಗ್ಗೆ ಏನು ಗೊತ್ತಿದೆ. ಬಸವೇಶ್ವರರ ತತ್ವ, ಸಿದ್ಧಾಂತ, ನೀತಿ ಬಗ್ಗೆ ಏನಾದರೂ ಗೊತ್ತಿದೆಯಾ. ಇಲ್ಲಿ ಬಂದು ಎಲ್ಲ ಗೊತ್ತಿರುವ ರೀತಿ ಹುಚ್ಚುಚ್ಚಾಗಿ ಮಾತನಾಡುತ್ತಾರೆ ಎಂದು ಹರಿಹಾಯ್ದರು.
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ರವರ ಮುಂದೆ ರಾಹುಲ್‌ಗಾಂಧಿ ಯಾವ ಲೆಕ್ಕ ಎಂದು ಯಡಿಯೂರಪ್ಪನವರು ಹೇಳಿದರು.